ಸೈನಿಕ ಶಾಲೆ, ಹತ್ತಿ ನಿಗಮ ಕಚೇರಿ, ಹುಬ್ಬಳ್ಳಿಗೆ ರೈಲ್ವೆ ವಲಯಗಳು ಈ ಭಾಗಕ್ಕೆ ಶೀಘ್ರ; ಬಿಎಸ್‍ವೈ

ಯಾದಗಿರಿ, ಜಿಲ್ಲೆಗೆ ಬೇಕಾಗಿರುವ ಸೈನಿಕ ಶಾಲೆ, ಹತ್ತಿ ನಿಗಮದ ಕಚೇರಿ, ಹಾಗೂ ಈ ಭಾಗದ ರೈಲ್ವೆ ಯೋಜನೆಯ ವ್ಯಾಪ್ತಿಯನ್ನು ಹುಬ್ಬಳ್ಳಿ ವಿಭಾಗಕ್ಕೆ ಸೇರ್ಪಡೆ ಮಾಡುವುದು ಸೇರಿದಂತೆ ಎಲ್ಲ ಪ್ರಮುಖ ಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಬೇಡಿಕೆ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟ ಭರವಸೆ ನೀಡಿದರು.
ನಗರದಲ್ಲಿ ನೂತನವಾಗಿ ಆರಂಭಗೊಂಡ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನೆ ಹಾಗೂ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು (ಯಿಮ್ಸ್) ಕಟ್ಟಡಕ್ಕೆ ಶಂಕುಸ್ಥಾಪನೆ ಸೇರಿದಂತೆ ಒಟ್ಟು 530ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜಾ ಅಮರೇಶ್ವರ ನಾಯಕರು ಸಲ್ಲಿಸಿದ ಪ್ರಸ್ತಾವನೆ ಹಾಗೂ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ಅವರ ಮನವಿಯಂತೆ ಹಂತಹಂತವಾಗಿ ಎಲ್ಲ ಬೇಡಿಕೆಗಳು ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದರು.
ಇನ್ನುಳಿದಂತೆ ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರ ಜಿಲ್ಲೆಯ ಜನತೆಯ ಜೊತೆಗೆ ಇರಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ್ (ರಾಜುಗೌಡ), ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಜಿಲ್ಲಾಧಿಕಾರಿ ಡಾ. ರಾಗಪ್ರಿಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.

ರಾಯಚೂರಿಗೆ ಏಮ್ಸ್, ಯಾದಗಿರಿಗೆ ಯಿಮ್ಸ್: ಪ್ರಧಾನಿ ಅಸ್ತು:ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲತ್ತು ಪಡೆಯಲು ಮುಖ್ಯಮಂತ್ರಿಗಳು ಮನವಿ ಸಲ್ಲಿಸಬೇಕೆಂದು ಸಂಸದ ರಾಜಾ ಅಮರೇಶ್ವರ ನಾಯಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಜಿಲ್ಲೆಗೆ ಸೈನಿಕ ಶಾಲೆ, ರಾಯಚೂರಿಗೆ ಹತ್ತಿ ನಿಗಮದ ಖರೀದಿ ಕೇಂದ್ರ ಆರಂಭಿಸಬೇಕು ಮತ್ತು ಈ ಭಾಗದ ರೈಲ್ವೆ ವಲಯವನ್ನು ವಿಶಾಖಪಟ್ಟಣಕ್ಕೆ ಸೇರಿಸಿರುವುದನ್ನು ಕೈಬಿಟ್ಟು ಹುಬ್ಬಳ್ಳಿ ವಿಭಾಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಕೇಂದ್ರಕ್ಕೆ ರಾಜ್ಯ ಸರ್ಕಾರದ ವತಿಯಿಂದ ಶಿಫಾರಸ್ಸು ಸಲ್ಲಿಸಬೇಕೆಂದು ಅವರು ಮನವಿ ಮಾಡಿಕೊಂಡರು.
ಈ ವಿಷಯಗಳ ಕುರಿತು ಸಂಸತ್ತಿನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಬೇಕಿರುವುದರಿಂದ ಮುಖ್ಯಮಂತ್ರಿಗಳು ಪ್ರಸ್ತಾವನೆ ಕಳಿಸಿಕೊಡಲು ಆದೇಶಿಸಬೇಕೆಂದು ಮನವಿ ಮಾಡಿದರು. ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯೂ ಬಂದಲ್ಲಿ ಈ ಎಲ್ಲ ಬೇಡಿಕೆಗಳು ಶೀಘ್ರ ಈಡೇರಲಿವೆ ಎಂದು ರಾಜಾ ಅಮರೇಶ್ವರ ನಾಯಕ ಮನವಿ ಮಾಡಿಕೊಂಡರು.