ಸೈನಿಕ ಶಾಲೆ ಪ್ರವೇಶ ಇದೇ ವರ್ಷದಿಂದ ಆರಂಭ : ಡಾ.ರಜನೀಶ್ ವಾಲಿ

ಬೀದರ, ಮಾ.27 : ಪ್ರಸಕ್ತ ವರ್ಷದಿಂದಲೇ ಸೈನಿಕ ಶಾಲೆ ಪ್ರವೇಶವನ್ನು ಆರಂಭಿಸಲಾಗುವುದೆಂದು ಹೈದ್ರಾಬಾದ್ ಕರ್ನಾಟಕ ಆಡಳಿತ ಮಂಡಳಿ ಸದಸ್ಯರಾದ ಡಾ.ರಜನೀಶ್ ವಾಲಿಯವರು ಹೇಳಿದರು. ಅವರು ನಗರದ ಯೋಗೀಶ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾದ ಮರೆಯಲಾಗದ ಮಹನೀಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ತಾವು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅವಿರತ ಸೇವೆಯ ಫಲವಾಗಿ ತಮಗೆ ಮತ್ತೊಮ್ಮೆ ಹೆಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ದಿ.ಚೆನ್ನವೀರಯ್ಯ ಸ್ವಾಮಿ ಮಠದ ಅವರು ಚಿತ್ರಕಲಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅವಿಸ್ಮರಣೀಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾದ ಡಾ.ಸಂಜೀವಕುಮಾರ ಅತಿವಾಳೆಯವರು ಮತನಾಡಿ, ದಿ.ಚನ್ನವೀರಯ್ಯ ಮಠದ ಅವರು ಅನೇಕರ ಬಾಳಿಗೆ ನೆಲೆಯನ್ನು ಒದಗಿಸಿಕೊಟ್ಟಿದ್ದಾರೆ. ವ್ಯಕ್ತಿ ಇಲ್ಲದ ಸಮಯದಲ್ಲಿ ಅವರ ಸೇವೆಯನ್ನು ಸ್ಮರಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ, ಪ್ರತಿಯೊಬ್ಬರೂ ತಮ್ಮ ತಮ್ಮ ದ್ವೇಷವನ್ನು ಅಳಿಸಿ ಪ್ರೀತಿ ಉಳಿಸಬೇಕು, ಆ ಮೂಲಕ ತಮ್ಮ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಬೇಕು, ಮುಂಬರುವ ದಿನಗಳಲ್ಲಿ ಗಡಿನಾಡಿನ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಡಾ.ಪ್ರೇಮಲತಾ ಪಾಟೀಲ ಅವರು ಮಾತನಾಡಿ, 90ರ ದಶಕದಿಂದ ಯೋಗೀಶ್ ಮಹಾವಿದ್ಯಾಲಯವು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ, ದಿ.ಚನ್ನವೀರಯ್ಯ ಮಠದ ಅವರು ಶಾಂತ ಸ್ವಭಾವದ ವ್ಯಕ್ತಿಯಾಗಿದ್ದರು. ಈ ಸಂಸ್ಥೆಯನ್ನು ಕಟ್ಟುವಲ್ಲಿ ಶಾಂತಾ ಮಠದ ಅವರ ಪರಿಶ್ರಮವೂ ಸಾಕಷ್ಟಿದೆ, ಇಂತಹ ಮಹನೀಯರನ್ನು ಸ್ಮರಿಸುವ ಪುಣ್ಯಕಾರ್ಯ ಕಸಾಪ ಮಾಡುತ್ತಿರುವುದು ಶ್ಲಾಘನೀಯ ಎಂದರು. ಶ್ರೀಮತಿ ಶಾಂತಾ ಚ. ಮಠದ ಅವರು ಮಾತನಾಡಿ, ತನ್ನ ಮೈಮೇಲಿನ ಒಡವೆಗಳನ್ನು ಮಾರಿ ಚನ್ನವೀರಯ್ಯ ಮಠದ ಅವರು ಈ ಸಂಸ್ಥೆಯನ್ನು ಕಟ್ಟಿದ್ದಾರೆ, ದಿ.ಗುಂಡುರಾವ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ನಮಗೆ ಈ ಸಂಸ್ಥೆಯನ್ನು ಪ್ರಾರಂಭಿಸಿಲು ಅನುಮತಿ ನೀಡಿದರೆಂದು ಸ್ಮರಿಸಿದರು.

ಆಶಯ ನುಡಿಗಳನ್ನಾಡಿದ ಕಸಾಪ ಗೌ.ಕಾರ್ಯದರ್ಶಿ ಶಿವಕುಮಾರ ಕಟ್ಟೆಯವರು, ಮಹಾತ್ಮರ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿದವರನ್ನು ಸ್ಮರಿಸುವ ಉದ್ದೇಶದಿಂದ ‘ಮರೆಯಲಾಗದ ಮಹನೀಯರು’ ಎನ್ನುವ ಕಾರ್ಯಕ್ರಮ ರೂಪಿಸಿದ್ದಾಗಿ ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಅನೇಕ ಸಮ್ಮೇಳನಗಳನ್ನು ಮಾಡುವುದರ ಮಧ್ಯದಲ್ಲಿಯೂ ಇಂತಹ ಮಹನೀಯರನ್ನು ಸ್ಮರಿಸುವ ಮೂಲಕ ಕಸಾಪ ಮಹತ್ವದ ಹೆಜ್ಜೆಯನ್ನಿಕ್ಕುತ್ತಿದೆ ಎಂದರು.

ದಿ.ಚನ್ನವೀರಯ್ಯಸ್ವಾಮಿ ಮಠದ ಅವರನ್ನು ಕುರಿತು ಶಂಭುಲಿಂಗ ವಾಲದೊಡ್ಡಿ, ವಿಜಯಕುಮಾರ ಗೌರೆ, ಪ್ರಕಾಶ ತಾಂದಳೆ, ಶ್ರೀಕಾಂತ ಬಿರಾದಾರ ಮತ್ತು ಶಿವರಾಜ ಮಿತ್ರ ಮಾತನಾಡಿದರು. ಆರಂಭದಲ್ಲಿ ಕಸಾಪ ಗೌ.ಕಾರ್ಯದರ್ಶಿ ಟಿ.ಎಂ.ಮಚ್ಛೆ ಸ್ವಾಗತಿಸಿದರು, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ ನಿರೂಪಿಸಿದರು. ದಿವ್ಯಾ ಮಠದ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಯು.ಕೆ.ಪ್ರತಿನಿಧಿ ಆದೀಶ್ ವಾಲಿ, ಎಂ.ಡಿ.ಶರೀಫ್, ಭಾರತಿ ವಸ್ತ್ರದ, ಯೋಗೀಶ್ ಮಠದ, ಬಾಬುರಾವ ದಾನಿ, ಗುರುನಾಥ ರಾಜಗೀರಾ, ಶಿವಕುಮಾರ ಚನ್ನಶಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.