ಸೈನಿಕರ ಶಿಸ್ತು,ಕ್ರಿಯಾಶೀಲತೆ ಅಳವಡಿಸಿಕೊಳ್ಳಿ:ಪ್ರಜ್ಞಾನಂದ ಸ್ವಾಮೀಜಿ

ವಿಜಯಪುರ:ಎ.4: 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾಲೂಕಿನ ನಾಗಠಾಣ ಗ್ರಾಮದ ಯೋಧ ಅಪ್ಪಾಸಾಹೇಬ ಹೊಸಟ್ಟಿ ಅವರನ್ನು ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಹಾಗೂ ಗ್ರಾಮಸ್ಥರು ಭವ್ಯ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು.ವಾದ್ಯ ಮೇಳದೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣೆಗೆ ನಡೆಸಿದರು. ಸ್ಕೌಟ್ಸ್ ಆಯಿಂಡ್ ಗೈಡ್ಸ್ ಮತ್ತು ಶಾಲಾ ವಿದ್ಯಾರ್ಥಿಗಳು ಕೂಡಾ ಪಾಲ್ಗೊಂಡಿದ್ದರು.
ದಿವ್ಯಸಾನಿಧ್ಯ ವಹಿಸಿದ್ದ ನಾಗಠಾಣ ಗುರುದೇವಾಶ್ರಮದ ಅಧ್ಯಕ್ಷ ಪ್ರಜ್ಞಾನಂದ ಸ್ವಾಮಿಗಳು ಮಾತನಾಡಿ,ಯೋಧರು ದೇಶಕ್ಕೆ ಅತ್ಯವಶ್ಯಕ. ರೈತ, ಸೈನಿಕ ಹಾಗೂ ಗುರು ಈ ಮೂರು ವ್ಯಕ್ತಿಗಳನ್ನು ಗೌರವಿಸಬೇಕು. ಮಕ್ಕಳು ಸೇನೆಗೆ ಸೇರುವ ಸಂಕಲ್ಪ ಮಾಡಬೇಕು.
ಯುವಜನತೆಗೆ ಸೈನಿಕರು ಮಾದರಿಯಾಗಬೇಕೆಂದು ಹೇಳಿದರು.
ವಿಶ್ರಾಂತ ಉಪನ್ಯಾಸಕರಾದ ಮಲ್ಲಮ್ಮ ಬಿರಾದಾರ ಮಾತನಾಡಿ, ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಬರುವ ಸೈನಿಕರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯುವಕರಿಗೆ ಮಾರ್ಗದರ್ಶನ ಮಾಡಿ, ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಜೀವದ ಹಂಗು ತೊರೆದು ಗಡಿ ರಕ್ಷಣೆಯಲ್ಲಿ ತೊಡಗಿರುವ ದೇಶದ ಸೈನಿಕರ ತ್ಯಾಗ, ಶಿಸ್ತು, ಕಾರ್ಯಶೈಲಿಯನ್ನು ಗೌರವಿಸಿ,
ನಮ್ಮ ಜೀವನದ ನಿತ್ಯ ಕಾರ್ಯದಲ್ಲಿ ಅವನ್ನು ಅಳವಡಿಸಿಕೊಂಡು ದೇಶದ ಬೆಳವಣಿಗೆಗೆ ದುಡಿಯಬೇಕೆಂದು ಹೇಳಿದರು.
ಸೈನಿಕ ಅಪ್ಪಾಸಾಹೇಬ ಹೊಸಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ,ನಮ್ಮ ಜೀವನದಲ್ಲಿ ತಾಯ್ನಾಡು ಸರ್ವಶ್ರೇಷ್ಠ.ಸೈನಿಕರು ತಾಯ್ನಾಡಿಗಾಗಿ ಬದುಕಿ ಪ್ರಾಣ ತ್ಯಾಗ ಮಾಡುತ್ತಾರೆ. ಪ್ರತಿ ಉಸಿರಿನಲ್ಲೂ ನಾವು ದೇಶ ಸೇವೆಯ ಬಗ್ಗೆ ಯೋಚಿಸುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಬಸು ಪೂಜೇರಿ, ಪೂಜಣ್ಣ ಪೂಜೇರಿ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಹುಣಶ್ಯಾಳ,ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ,ಶಿಕ್ಷಕರಾದ ಜಯಶ್ರೀ ಬಂಗಾರಿ,ಬಸಮ್ಮ ವಡಗೇರಿ,ಸ್ನೇಹಾ ಹಕ್ಕಿ,ಮಧುಮತಿ ನಿಕ್ಕಂ,ಸರೋಜಿನಿ ಕಟ್ಟಿಮನಿ, ಅಂಬಿಕಾ ಶಿರಕನಹಳ್ಳಿ, ರೇಣುಕಾ ಭಜಂತ್ರಿ ಸೇರಿದಂತೆ ಗ್ರಾಮಸ್ಥರು,ಗೆಳೆಯರು ಉಪಸ್ಥಿತರಿದ್ದರು.
ಶಿಕ್ಷಕ ತಿಪ್ಪಣ್ಣ ಜಂಬಗಿ ಸ್ವಾಗತಿಸಿದರು.ಸಂಗಮೇಶ ಬಂಡೆ ನಿರೂಪಿಸಿ,ವಂದಿಸಿದರು.