ಸೈದಾಪುರ:ಜೂ.14:ಪಟ್ಟಣದ ವಾರ್ಡ ಸಂಖ್ಯೆ 1ರ ಗಂಗಾ ನಗರದಲ್ಲಿ ಯುವಕ-ಯುವತಿಯರು ಸ್ವಯಂ ಪ್ರೇರಿತವಾಗಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೆಡ್ಡು ಹೊಡೆದರು. ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಮಳೆಯ ಅಬ್ಬರ ಸುರುವಾಗಿರುವುದರಿಂದ ಚರಂಡಿಗಳೆಲ್ಲವು ಮಳೆ ನೀರಿನಿಂದ ತುಂಬಿ ರಸ್ತೆ ಹಾಗೂ ಮನೆಯಂಗಳದಲ್ಲಿ ಹರಿಯುತ್ತಿವೆ. ಅದರಲ್ಲಿ ಗಂಗಾನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಯಿಂದ ಮಳೆ ನೀರು ಮತ್ತು ಗೃಹ ಬಳಕೆಯ ಅನುಪಯುಕ್ತ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಹರಿಯುತ್ತಿವೆ. ಅಲ್ಲದೆ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಕೂಡ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿರುವುದರಿಂದ ಹೂಳು, ಕಸ-ಕಡ್ಡಿ ಚರಂಡಿಯಲ್ಲಿ ತುಂಬಿಕೊಂಡು ನೀರು ಮನೆಯ ಅಂಗಳದಲ್ಲಿ ಹರಿದು ನಿಂತಿವೆ. ಕೆಟ್ಟ ದುರ್ವಾಸನೆ ಬೀರುವುದರ ಜೊತೆಗೆ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗಿದೆ. ಇದರಿಂದ ನೆಮ್ಮದಿಯಾಗಿ ರಾತ್ರಿ ನಿದ್ದೆ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಗಂಗಾನಗರದ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಬೆಸತ್ತ ಬಡಾವಣೆಯವರು ಸ್ವಇಚ್ಛೆಯಿಂದ ಬೆಳ್ಳಂ ಬೆಳ್ಳಗ್ಗೆ ಪುಟ್ಟಿ, ಸಲಿಕೆ ತೆಗೆದುಕೊಂಡು ದುರ್ವಾಸನೆ ಬೀರುವ ಕಸಕಡ್ಡಿ, ಹೂಳು ಎಲ್ಲವನ್ನು ತೆಗೆದು ಚರಂಡಿಯನ್ನು ಸ್ವಚ್ಛಗೊಳಿಸಿದರು. ನಂತರ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದವು. ಗ್ರಾಮ ಪಂಚಾಯಿತಿ ಪ್ರತಿ ವರ್ಷ ಮಳೆಗಾಲದಲ್ಲಿ ಉಂಟಾಗುವ ಇಂತಹ ಸಮಸ್ಯೆಗಳಿಗೆ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ತಕ್ಷಣ ಸ್ಪಂದಿಸಬೇಕು. ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಮೊದಲು ಚೆನ್ನಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಶ್ರಮವಹಿಸಿದ ಯುವಕರ ಈ ಕಾರ್ಯವು ಇತರರಿಗೆ ಮಾದರಿಯಾಗಿದೆ ಎಂದು ಗಂಗಾನಗರದ ಹಿರಿಯರು, ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.