ಸೈದಾಪುರ:ಶೇ.57ರಷ್ಟು ಶಾಂತಿಯುತ ಮತದಾನ

ಸೈದಾಪುರ:ಮೇ.11:ಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚಳದ ನಡುವೆಯು ಪಟ್ಟಣದಲ್ಲಿ ಬುಧವಾರ ಶಾಂತಿಯುತ ಮತದಾನ ನಡೆದಿದೆ. ಮತದಾನದ ನಂತರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೋಲು-ಗೆಲುವಿನ ಲೆಕ್ಕಚಾರದಲ್ಲಿ ತೊಡಗಿದ್ದಾರೆ.
ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸೈದಾಪುರದ 5 ವಾರ್ಡಗಳಲ್ಲಿ ಒಟ್ಟು 5485 ಮತದಾರರಿದ್ದರು. ಈ ಪೈಕಿ ಬುಧವಾರ ಜರುಗಿದ ಮತದಾನದಲ್ಲಿ ಪುರುಷರು 1581, ಮಹಿಳೆಯರು 1589 ಸೇರಿದಂತೆ ಒಟ್ಟು 3170 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಶೇ.57.79 ರಷ್ಟು ಮತದಾನವಾಗಿದೆ.
ಬೆಳಿಗ್ಗೆ ನಿಧಾನಗತಿಯಲ್ಲಿ ಆರಂಭವಾದ ಮತದಾನ ಪ್ರಕ್ರಿಯೆ ಮಧ್ಯಾಹ್ನ ಸಮಯಕ್ಕೆ ಬಿರುಸಿನಿಂದ ಕೂಡಿತ್ತು. ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ವಿವಿಧ ಪಕ್ಷದವರು ಹಿರಿಯರು, ವೃದ್ಧರು, ಯುವ ಮತದಾರರು ಮನೆಯಿಂದ ಮತಕೇಂದ್ರಕ್ಕೆ ಆಗಮಿಸಲು ಆಟೋ ವ್ಯವಸ್ಥೆಯನ್ನು ಮಾಡಲಾಗಿತ್ತು. ಮತ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಹಾಗೂ ಅರೆ ಸೇನಾ ಪಡೆಯನ್ನು ನಿಯೋಜಸಲಾಗಿತ್ತು. ಇದರಿಂದ ಮತದಾನ ಪ್ರಕ್ರಿಯೆಯು ಸುಗವಾಗಿ ಜರುಗಿತು.
ಬಾಕ್ಸ್: ತಾಂತ್ರಿಕ ಕಾರಣದಿಂದ ಅರ್ಧ ಗಂಟೆ ಮತದಾನ ಸ್ಥಗಿತ: ವಾರ್ಡ ಸಂಖ್ಯೆ 1ರಲ್ಲಿ ಮತಗಟ್ಟೆ ಸಂಖ್ಯೆ 247ರಲ್ಲಿ ಬೆಳಿಗ್ಗೆ 10 ಗಂಟೆಯಿಂದ ಅರ್ಧ ಗಂಟೆ ಇವಿಎಮ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಮತದಾನ ಸ್ಥಗಿತವಾದ ಘಟನೆ ನಡೆಯಿತು. ನಂತರ ತಾಂತ್ರಿಕ ಪರಿಣಿತರು ಆಗಮಿಸಿ ಮತದಾನ ಯಂತ್ರವನ್ನು ಬದಲಿಸಿ ಮತದಾನ ಪ್ರಕ್ರಿಯೆ ಸುಗಮಗೊಳಿಸಲು ಅನುವು ಮಾಡಿಕೊಟ್ಟರು.