ಸೈಕ್ಲಿಂಗ್ ಸ್ಪರ್ಧೆಯಲ್ಲಿ ಎಂ.ಎಸ್ ಸುಶ್ರುತ್ ಗೆ  ಚಿನ್ನದ ಪದಕ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨೪: ಸಂವೇದ ತರಬೇತಿ ಹಾಗೂ ಸಂಶೋಧನಾ ಕೇಂದ್ರದ ವಿಶೇಷ ವಿದ್ಯಾರ್ಥಿ ಎಂ.ಎಸ್. ಸುಶ್ರುತ್ ಜರ್ಮನಿಯ ಬರ್ಲಿನ್ ನಲ್ಲಿ ನಡೆದ ಇಂಟರ್ ನ್ಯಾಷನಲ್ ಸ್ಪೆಷಲ್ ಒಲಿಂಪಿಕ್ಸ್ ಸಮ್ಮರ್ ವರ್ಲ್ಡ್ ಗೇಮ್ಸ್-೨೦೨೩ ನ ಸೈಕ್ಲಿಂಗ್  ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ ಎಂದು ಸಂವೇದ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಸಂತಸ ಹಂಚಿಕೊಂಡರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯ ಮಂಜುನಾಥ್ ಹಾಗೂ ಮಮತಾ ಅವರ ಪುತ್ರ ಎಂ.ಎಸ್. ಸುಶ್ರುತ್  ಸಂವೇದ ವಿಶೇಷ ಶಾಲೆಗೆ  ಪ್ರವೇಶ ಪಡೆದರು. ದೈಹಿಕ ಶಿಕ್ಷಕ ದಾದಾಪೀರ್ ಅವರು ತರಬೇತಿಯೊಂದಿಗೆ ಈ ಸಾಧನೆಗೆ ಮುಂದಾಗಿದ್ದಾನೆ ಎಂದರು.ಕರ್ನಾಟಕದ ಹೆಡ್ ಕೋಚ್ ಆಗಿ ದಾದಾಪೀರ್ ಭಾಗವಹಿಸಿದ್ದು, ರಾಜ್ಯಮಟ್ಟ, ರಾಷ್ಟ್ರ ಮಟ್ಟದಲ್ಲಿ  ಪಾಲ್ಗೊಂಡು, ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಒಲಿಂಪಿಕ್ಸ್ ನ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾನೆ. ಆ ಮೂಲಕ ಸಂವೇದ ಶಾಲೆಗೆ ಕೀರ್ತಿ ತಂದಿದ್ದಾನೆ ಎಂದರು.ಈ ಸಂಬಂಧ ಸಂವೇದ ಕೇಂದ್ರದಿಂದ ಸುಶ್ರುತ್ ಗೆ  ಅಭಿನಂದನಾ ಸಮಾರಂಭವನ್ನು ಇದೇ ಜುಲೈ ೨೬ರಂದು ಸಂಜೆ ೫.೩೦ ಕ್ಕೆ ಕುವೆಂಪು ಕನ್ನಡ ಭವನದಲ್ಲಿ  ಸಂವೇದ ಅಧ್ಯಕ್ಷ  ಪತ್ರೆ ಎಸ್. ದೇವದತ್ತ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಚಾಲನೆ ನೀಡಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಜಿ.ಆರ್. ತಿಪ್ಪೇಶಿಪ್ಪಾ, ಡಾ. ಜಿ.ಡಿ. ರಾಘವನ್, ಡಾ. ಕೆ. ಪ್ರಕಾಶ್, ಎಸ್.ಜೆ. ಶ್ರೀಧರ್, ಡಾ. ಎಂ. ಅನುಪಮಾ, ತಮರಾಯ್ ಸೆಲ್ವನ್, ಅಮರೇಂದ್ರ ಮತ್ತು ಡಿ.ಕೆ. ಭಾರತಿ ಆಗಮಿಸಲಿದ್ದಾರೆ ಎಂದರು.ತರಬೇತುದಾರ ದಾದಾಪೀರ್ ಮಾತನಾಡಿ, ಸುಶ್ರುತ್ ಶಾಲೆ ಸೇರಿದ ಹೊಸದರಲ್ಲಿ ಸೈಕಲ್ ತುಳಿಯಲು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ತರಬೇತಿ ಪಡೆದ ನಂತರ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಅಲ್ಲಿ ಆಯ್ಕೆ ಆಗಲಿಲ್ಲ. ಮುಂದೆ ಹೆಚ್ಚಿನ ತರಬೇತಿಯೊಂದಿಗೆ ತಯಾರಾದ ಸುಶ್ರುತ್ ರಾಜ್ಯ, ರಾಷ್ಟ್ರ ಹಾಗೂ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ತೋರಿದ್ದಾನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂವೇದ ವಿಶೇಷ ತರಬೇತುದಾರರಾದ ನೀತಾ ಎಸ್. ಸುರ್ವೆ ಉಪಸ್ಥಿತರಿದ್ದರು.