ಸೈಕಲ್ ಬಳಕೆಯಿಂದ ಮನುಷ್ಯನ ದೇಹದ ಎಲ್ಲಾ ಅಂಗಾಂಗಕ್ಕೂ ವ್ಯಾಯಾಮ


ಬಳ್ಳಾರಿ,ಜೂ.04: ಸೈಕಲ್ ಬಳಕೆ ಮಾಡುವುದರಿಂದ ಮಾನವ ದೇಹ ಎಲ್ಲಾ ಅಂಗಗಳಿಗೂ ವ್ಯಾಯಾಮ ಸಿಗುವುದರ ಜೊತೆಗೆ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಹೇಳಿದರು.
 “ವಿಶ್ವ ಬೈಸಿಕಲ್ ದಿನಾಚರಣೆ”ಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಕೋಶ, ಭಾರತೀಯ ವೈದ್ಯಕೀಯ ಸಂಘ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಸೈಕ್ಲಿಂಗ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ “ಆರೋಗ್ಯಕ್ಕಾಗಿ ಸೈಕಲ್ (Cycle for Health)” ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಶನಿವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಮೂಲಕ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೈಕಲ್ ತುಳಿಯುವುದರಿಂದ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ.ಮರಿಯಂಬಿ.ವಿ.ಕೆ ಅವರು ಮಾತನಾಡಿ, ಆಧುನಿಕ ಜೀವನ ಶೈಲಿಯಲ್ಲಿ ಮೋಟರ್ ವಾಹನಗಳನ್ನು ದಿನ ನಿತ್ಯದ ಕಾರ್ಯಗಳಿಗೆ ಅತಿಯಾದ ಬಳಕೆಯಿಂದ ಮನುಷ್ಯನಿಗೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಅವುಗಳಲ್ಲಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಸೇರಿ ಮುಂತಾದ ಕಾಯಿಲೆಗಳ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾನೆ. ಸೈಕಲ್ ಬಳಕೆ ಮಾಡುವುದರಿಂದ ಅಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ.ಜಯಶ್ರೀ ಅವರು ಮಾತನಾಡಿ, ಸೈಕಲ್ ಬಳಸುವುದರಿಂದ ಖರ್ಚು ಕಡಿಮೆಯಾಗುವುದರ ಜೊತೆಗೆ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು ಹಾಗೂ ಮನಸ್ಸು ಲವಲವಕೆಯಿಂದ ಕೂಡಿರುತ್ತದೆ. ವಾರದಲ್ಲಿ ಕನಿಷ್ಟ 2 ದಿನ 10 ರಿಂದ 15 ಕಿಲೋ ಮೀಟರ್ ಸೈಕಲ್ ಸವಾರಿ ಮಾಡುವುದರಿಂದ ಆರೋಗ್ಯ ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜನ ಜಾಗೃತಿ ಸೈಕಲ್ ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಆರಂಭವಾಗಿ ಸಂಗಮ್ ಸರ್ಕಲ್, ರಾಯಲ್ ಸರ್ಕಲ್, ಮೋತಿ ಸರ್ಕಲ್, ಸುಧಾ ಸರ್ಕಲ್ ಮೂಲಕ ಇನ್‍ಫ್ಯಾಂಟರಿ ರಸ್ತೆ ಮಾರ್ಗವಾಗಿ ಅಗ್ನಿಶಾಮಕ ದಳ ಕಚೇರಿ ಹಾಗೂ ಎಸ್‍ಪಿ ವೃತ್ತದಿಂದ ದುರ್ಗಮ್ಮ ದೇವಸ್ಥಾನ ದಿಂದ ಕೋರ್ಟ್ ರಸ್ತೆ ಮೂಲಕ ಮರಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣಕ್ಕೆ ಅಂತ್ಯಗೊಂಡಿತು.
ಇದೇ ಸಂದರ್ಭದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಕುರಿತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ್ ದಾಸಪ್ಪನವರು ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಾರ್ಯಕ್ರಮದ ಸಂಯೋಜಕರಾದ ಡಾ.ಜಬೀನ್ ತಾಜ್.ಟಿ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರ ಕುಮಾರ್, ಐ.ಎಂ.ಎ ಕಾರ್ಯದರ್ಶಿ ಡಾ.ಚಂದ್ರಶೇಖರ್, ಸೈಕ್ಲಿಂಗ್ ರನ್ನರ್ಸ್ ಕ್ಲಬ್‍ನ  ಪ್ರಶಾಂತ್, ಡಾ.ದಿನೇಶ್, ಡಾ.ಸುದರ್ಶನ್ ಗೌಡ, ಡಾ.ಚಂದ್ರಶೇಖರ.ಜಿ, ಡಾ.ರಾಮರಾಜ್, ಡಿ.ಎಚ್.ಇ.ಒ ಈಶ್ವರ್ ದಾಸಪ್ಪನವರು, ಜಿಲ್ಲಾ ಸಾಂಕ್ರಾಮಿಕ ರೋಗ ನಿರ್ವಹಕ ಶಾಸ್ತ್ರಜ್ಞೆ ಡಾ.ಪ್ರಿಯಾಂಕ, ತಂಬಾಕು ನಿಯಂತ್ರಣ ಕೋಶದ ಎಸ್.ಭೋಜರಾಜ ಹಾಗೂ ಇತರರು ಉಪಸ್ಥಿತರಿದ್ದರು.
ಜಾಥಾದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.