ಸೈಕಲ್‌ನಲ್ಲಿ ೨೨ ದೇಶಕ್ಕೆ ಕೇರಳದ ಯುವತಿ ಪ್ರವಾಸ

ಮಲಪ್ಪುರಂ, ನ. ೨೪- ಕೇರಳದ ೨೨ ವರ್ಷದ ಯುವತಿಯೊಬ್ಬಳು ಸೈಕಲ್ನಲ್ಲಿ ೨೨ ದೇಶಗಳ ಪ್ರವಾಸ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಕೇರಳದ ಒಟ್ಟಪಾಲಂನ ೨೨ ವರ್ಷದ ಯುವತಿ ಐಪಿ ಅರುಣಿಮಾ ಎಂಬುವವರು ೨೨ ವಿದೇಶಗಳಿಗೆ ಸೈಕಲ್ ನಲ್ಲಿಯೇ ಪ್ರವಾಸ ಕೈಗೊಂಡ ಇದೀಗ ಸುದ್ದಿಯಾಗಿದ್ದಾರೆ. ರಾಜ್ಯದ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ಮಲಪ್ಪುರಂನಲ್ಲಿ ಸುದೀರ್ಘ ಸಾಹಸ ಪ್ರಯಾಣಕ್ಕೆ ಹಸಿರು ನಿಶಾನೆ ತೋರುವ ಮೂಲಕ ಶುಭ ಹಾರೈಸಿದ್ದಾರೆ.
ಪ್ರವಾಸಿ ಪ್ರಿಯೆಯಾದ ಅರುಣಿಮಾ ಅವರು, ಸಾಹಸ ಪ್ರಯಾಣದ ಆರಂಭದಲ್ಲಿ ಮೊದಲು ಮುಂಬೈಗೆ ತಲುಪಲಿದ್ದು, ಬಳಿಕ ಅಲ್ಲಿಂದ ಅವರು ವಿದೇಶಗಳಿಗೆ ಸೈಕಲ್ನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಸಾಹಸಿ ಅರುಣಿಮಾ ಸುಮಾರು ೨೫ ಸಾವಿರ ಕಿಲೋಮೀಟರ್‌ಪ್ರಯಾಣ ಮಾಡಲಿದ್ದು, ಈ ವೇಳೆ ಅವರು ಗಲ್ಫ್ ಮತ್ತು ಆಫ್ರಿಕನ್ ರಾಷ್ಟ್ರಗಳಿಗೆ ಪ್ರವಾಸ ಮಾಡಲಿದ್ದಾರೆ. ಇವರ ಸಾಹಸಕ್ಕೆ ಪೋಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ
ಸೈಕಲ್ ಹತ್ತಿ ವಿಶ್ವಪರ್ಯಟನೆ ಶುರು ಮಾಡಿರುವ ಅರುಣಿಮಾ ಅವರ ಪ್ರಯಾಣದ ಅವಧಿ ೨ ವರ್ಷಗಳು ಹಿಡಿಯಲಿವೆ ಎಂದು ಅಂದಾಜಿಸಲಾಗಿದೆ. ಅರುಣಿಮಾ ಭೇಟಿ ನೀಡುವ ಕೆಲವು ದೇಶಗಳಿಗೆ ವೀಸಾ ಸಿಗುವುದು ಕಷ್ಟಕರವಾಗಿದ್ದರೂ, ವಿದೇಶಿ ಪ್ರವಾಸಿಯಾಗಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.