ಸೇವೆ ಮಾಡಿದ್ದರೆ ಭೂಮಿತಾಯಿ ಕೈ ಬಿಡುತ್ತಿರಲಿಲ್ಲ

ವಿಜಯಪುರ.ಫೆ೧೨:ಹೋಬಳಿಯ ನಾರಾಯಣಪುರ ಗ್ರಾಮದ ರೈತ ಎನ್ ಡಿ ರಾಮಕೃಷ್ಣಪ್ಪ ರವರ ಕೋಳಿ ಫಾರಂ ಗೆ ೨೦೨೨ನೇ ವರ್ಷದ ಸೆಪ್ಟಂಬರ್‌ನಲ್ಲಿ ಬಿದ್ದ ಭಾರಿ ಮಳೆಯಿಂದ ಸುಮಾರು ೧೧೫೦೦ ಕೋಳಿ ಮರಿಗಳು ಸತ್ತು ಹೋಗಿದ್ದು, ಆ ಸಮಯಕ್ಕೆ ಶಾಸಕರು, ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಭೇಟಿ ನೀಡಿ ಶೀಘ್ರವೇ ಸರ್ಕಾರದಿಂದ ಅವಶ್ಯಕವಾಗಿ ಕೊಡಿಸಬೇಕಾದ ಪರಿಹಾರವನ್ನು ಕೊಡಿಸಿ ಕೊಡುವುದಾಗಿ ಭರವಸೆ ನೀಡಿ ಹೋದವರು ಇದುವರೆಗೂ ಯಾವುದೇ ನಯಾ ಪೈಸೆ ಪರಿಹಾರ ಬಾರದೆ ಕೇವಲ ಪ್ರತಿದಿನ ಈ ಕಚೇರಿ ಆ ಕಚೇರಿ ಎಂದು ಸುತ್ತುವುದೇ ಆಗಿದೆ ಎಂದು ರೈತ ರಾಮಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದ್ದರು.
ಬೊಗಳೆ;-ಇದರೊಂದಿಗೆ ಕಳೆದ ೨೭-೧೧-೨೦೨೩ ರಂದು ನಡೆದ ಮುಖ್ಯಮಂತ್ರಿಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿಯೂ ಸಹ ರಾಮಕೃಷ್ಣಪ್ಪ ರವರು ಮುಖ್ಯಮಂತ್ರಿಗಳಿಗೆ ನೇರವಾಗಿ ಮನವಿ ಸಲ್ಲಿಸಿದ್ದು ಇತ್ತೀಚೆಗೆ ಪತ್ರಿಕೆಗಳಲ್ಲಿ ಕಳೆದ ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದಿದ್ದ ಅರ್ಜಿಗಳಲ್ಲಿ ಶೇ ೯೮ ರಷ್ಟಕ್ಕೆ ಪರಿಹಾರ ನೀಡಿದ್ದು ಉಳಿದ ಶೇ.೨ರಷ್ಟು ಸಮಸ್ಯೆಗಳಿಗೆ ಹಿಂಬರಹವನ್ನು ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆ ನೋಡಿ ಬೇಸರಗೊಂಡು ಮುಖ್ಯಮಂತ್ರಿಗಳ ಜನಸ್ಪಂದನದಲ್ಲಿ ತಾವು ಒಬ್ಬರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು ನಮಗೆ ಪರಿಹಾರವೂ ಇಲ್ಲ ಹಿಂಬರಹವು ಇಲ್ಲ ಹೀಗಿದ್ದಾಗ ಕೇವಲ ಸುಳ್ಳುಗಳನ್ನು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
೨೦೨೨ನೇ ಇಸವಿಯ ಸೆಪ್ಟೆಂಬರ್ ತಿಂಗಳಿನ ೫ನೇ ತಾರೀಖಿನಂದು ಬಿದ್ದ ಮಳೆಗೆ ರಾಮಕೃಷ್ಣಪ್ಪ ರವರ ಕೋಳಿ ಫಾರಂ ಸಂಪೂರ್ಣ ನಾಶವಾಗಿ ಅದರಲ್ಲಿದ್ದ ೧೧೫೦೦ಕ್ಕೂ ಹೆಚ್ಚು ಕೋಳಿಗಳು ಸತ್ತು ಹೋಗಿದ್ದು ಅವುಗಳನ್ನು ಅಂತ್ಯಸಂಸ್ಕಾರ ಮಾಡಲು ಸಾಕಷ್ಟು ಪರದಾಡಿದ್ದರು.
ಅಂದು ನಷ್ಟವಾಗಿ ಮುಚ್ಚಿದ್ದ ಕೋಳಿ ಫಾರಂ ಅನ್ನು ಇದುವರೆಗೂ ಪುನರ್ ಪ್ರಾರಂಭಿಸಲು ಸಾಧ್ಯವಾಗಿಲ್ಲ ಇದರ ಬಗ್ಗೆ ಎಲ್ಲಾ ಪತ್ರಿಕೆಗಳು, ಟಿವಿ ಗಳಲ್ಲಿಯೂ ವಿಚಾರ ಬಂದಿದ್ದು ಮೊದಮೊದಲಿಗೆ ಪರಿಶೀಲನೆಗೆ ಬಂದ ಅಧಿಕಾರಿಗಳು ೮ ಲಕ್ಷ ರೂಗಳ ವರೆಗೆ ಪರಿಹಾರ ಬರಬಹುದೆಂದು ಹೇಳಿದ್ದರು. ನಂತರ ಎಷ್ಟೇ ಕೋಳಿಗಳು ಸತ್ತಿದ್ದರು ಸಹ ಐವತ್ತು ರೂಗಳಂತೆ ನೂರು ಕೋಳಿಗಳಿಗೆ ಮಾತ್ರ ಪರಿಹಾರ ನೀಡಲಿದ್ದು ೫೦೦೦ ದೊರೆಯಲಿದೆ ಎಂದು ತಿಳಿಸಿದರು ಆದರೆ ಐದು ನಯಾ ಪೈಸೆ ಸಹ ಪರಿಹಾರ ಬಾರದಿದ್ದರೆ ಹೋಗಲಿ ಒಂದು ಸಾಂತ್ವನದ ಒಂದು ಪತ್ರ ಕೂಡ ಇಲ್ಲದೆ ಈಗಾಗಲೇ ನಾವು ಕಚೇರಿಗಳಿಗೆ ಹತ್ತಾರು ಸಾವಿರಗಳನ್ನು ಖರ್ಚು ಮಾಡಿಕೊಂಡು ಅಲೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.