ಸೇವೆಯ ಹೆಸರಿನಲ್ಲಿ ದುಡಿಮೆ  ಮಾಡುವ ಜನಪ್ರತಿನಿಧಿಗಳು

ದಾವಣಗೆರೆ.ಜು.೨೦;  ರಾಜಕೀಯವೆಂದರೆ ಇಂದು ಅದು ಉದ್ದಿಮೆಯಾಗಿ ಪರಿವರ್ತನೆಗೊಂಡಿದೆ. ಬಂಡವಾಳ ಹಾಕಿ ಲಾಭ ತೆಗೆಯುವ ಧಾವಂತದಲ್ಲಿ ಎಲ್ಲರೂ ಇದ್ದಾರೆ. ಸೇವೆಯ ಹೆಸರಿನಲ್ಲಿ ದುಡಿಮೆ  ಮಾಡುವ ಜನಪ್ರತಿನಿಧಿಗಳು 3ತಲೆಮಾರಿನ ಜನರು ತಿಂದರೂ ಕರಗದಷ್ಟು ಆಸ್ತಿ ಮಾಡುವಂಥ ಸ್ಥಿತಿಗೆ ತಲುಪಿರುವುದು ಈ ದೇಶದ ದುರಂತ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ ವಿ ಲೋಕೇಶ್ ಕಳವಳ ವ್ಯಕ್ತಪಡಿಸಿದರು.ದಾವಣಗೆರೆಯ ಶೇಖರಪ್ಪ ನಗರದ ಈರುಳ್ಳಿ ಮಾರುಕಟ್ಟೆ ರಸ್ತೆಯಲ್ಲಿನ ಮುಖ್ಯ ರಸ್ತೆಯಲ್ಲಿನ ಕಾಮ್ರೇಡ್ ಅಡಿವೆಪ್ಪ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಸೇವೆ ಮಾಡುವ ಹೆಸರು ಹೇಳಿಕೊಂಡು ಬರುವ ರಾಜಕಾರಣಿಗಳು ಇಂದು ಭ್ರಷ್ಟಾಚಾರ, ಹಗರಣದಲ್ಲಿ ಮುಳುಗಿ ಹೋಗಿದ್ದಾರೆ. ಅಲ್ಲದೆ ಆಸ್ತಿಯನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.ಪ್ರಜ್ಞಾವಂತ ನಾಗರಿಕರು ಸಹ ರಾಜಕೀಯದ ಬಗ್ಗೆ ಬೇಸತ್ತು ಹೋಗಿದ್ದಾರೆ. ರಾಜಕೀಯವೆಂದರೆ ಸೇವೆಯಲ್ಲ ಅದು ಉದ್ದಿಮೆ ಎನ್ನುವಂತಾಗಿದೆ. ಶಿಕ್ಷಣ ಸಂಸ್ಥೆಗಳು, ಸಿನಿಮಾ ಸಂಸ್ಥೆಗಳು, ನಾಟಕಗಳು, ಕಲಾಸೇವೆಗಳು ಈಗ ಉದ್ದಿಮೆಗಳಾಗಿವೆ. ಇವುಗಳು ಮಾತ್ರವಲ್ಲದೆ ಧಾರ್ಮಿಕ ಕೇಂದ್ರಗಳು ಸಹ ಉದ್ದಿಮೆಗಳಾಗಿ ಪರಿವರ್ತನೆಗೊಂಡಿರುವುದು ಉತ್ತಮ ಬೆಳವಣಿಗೆ ಅಲ್ಲ. ಇದೆಲ್ಲದರ ಮಧ್ಯೆ ಚುನಾವಣೆ ಕೂಡ ಉದ್ದಿಮೆಯಾಗಿ ಪರಿವರ್ತನೆಗೊಂಡಿರುವುದು ದೇಶದ ದುರಂತ ಕೂಡ ಕಳವಳ ವ್ಯಕ್ತಪಡಿಸಿದರು.ಸಮುದಾಯ ಭವನ ಉದ್ಘಾಟಿಸಿದ ಸಿಪಿಐ ರಾಜ್ಯ ಮಂಡಳಿ ಸದಸ್ಯ ಸಾತಿ ಸುಂದರೇಶ್ ಮಾತನಾಡಿ, ಒಂದು ಕಾಲದಲ್ಲಿ ದಾವಣಗೆರೆ ಎಂದರೆ ಹೋರಾಟಗಳ ನಗರ ಎಂದೇ ಖ್ಯಾತಿಯಾಗಿತ್ತು. 50ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿತು. ಅಂತಹ ಗತವೈಭವ ಮತ್ತೆ ಮರಳಿ ಬರಬೇಕಾಗಿದೆ. ಹೋರಾಟ, ಚಳುವಳಿಗಳ ಮೂಲಕ ನಮ್ಮ ಪಕ್ಷ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಅಲ್ಲದೆ ನಗರದ ಅಭಿವೃದ್ಧಿಗೆ ಯತ್ನ ಗಮನಹರಿಸಬೇಕು ಎಂದರು.ಪ್ರಸ್ತುತ ಆಡಳಿತ ನಡೆಸುವ ಸರ್ಕಾರಗಳು ತೆರಿಗೆ ಹೆಸರಿನಲ್ಲಿ ಬಡವರು, ಜನಸಾಮಾನ್ಯರು ಜೀವನ ಮಾಡಲಾರದಷ್ಟು ತೆರಿಗೆಗಳನ್ನು ಏರಿಕೆ ಮಾಡಿದ್ದಾರೆ. ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳು ಸೇರಿದಂತೆ ಇಂಧನ ಬೆಲೆ ಏರಿಕೆಗಳಿಂದಾಗಿ ಜನರು ತತ್ತರಿಸಿದ್ದಾರೆ. ಇಂಥ ಸರ್ಕಾರಗಳಿಗೆ ಜನ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಕರೆ ನೀಡಿದರು.ದಾವಣಗೆರೆಯಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷದ ಚಳವಳಿಗೆ ಹಿನ್ನಡೆಯಾಗಿದೆ. ಇದಕ್ಕೆ ಈಗಿರುವ ಸನ್ನಿವೇಶಗಳು ಕಾರಣ. ಈ ಹಿಂದಿನ ಹೋರಾಟದ ನೆನಪುಗಳನ್ನು ಮೆಲುಕು ಹಾಕುತ್ತ ಪಕ್ಷವು ಚಳುವಳಿ ಮತ್ತು ಹೋರಾಟಗಳನ್ನು ಸಂಘಟಿಸಿ ಜನರಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ ಖಜಾಂಚಿ ಆನಂದರಾಜ್ ವಹಿಸಿದ್ದರು. ವೇದಿಕೆಯಲ್ಲಿ ಎಚ್.ಜಿ.ಉಮೇಶ್, ರಾಘವೇಂದ್ರ ನಾಯರಿ, ಟಿ.ಎಸ್.ನಾಗರಾಜ್, ಎಂ.ಬಿ.ಶಾರದಮ್ಮ, ಮಹಮ್ಮದ್ ಬಾಷಾ, ಚಿನ್ನಪ್ಪ, ಆವರಗೆರೆ ವಾಸು, ಆವರಗೆರೆ ಚಂದ್ರು ಐರಣಿ ಚಂದ್ರು, ನಾಗರಾಜ್, ದಾದಾಪೀರ್, ಮುಹಮ್ಮದ್ ರಫೀಕ್, ಎಚ್.ಕೆ.ಕೊಟ್ರಪ್ಪ, ವಿ.ಲಕ್ಷ್ಮಣ್, ಭೀಮಾರೆಡ್ಡಿ, ಶಿವಕುಮಾರ್ ಶೆಟ್ಟರ್ ಸೇರಿದಂತೆ ಇತರರು ಇದ್ದರು.