ಸೇವೆಯೇ ಎಲ್ಲಕ್ಕಿಂತ ಶ್ರೇಷ್ಠ ಕಾರ್ಯ: ಡಿ.ಸಿ ರಾಮಚಂದ್ರನ್

ಬೀದರ:ನ.11: ಸಂಕಷ್ಟದಲ್ಲಿದ್ದವರ ನೆರವಿಗೆ ಬರುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾದರೆ ಅನೇಕರ ಬಾಳು ಹಸನಾಗುತ್ತದೆ. ಸೇವೆಯೇ ಎಲ್ಲಕ್ಕಿಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಹೇಳಿದರು.

ನಗರದ ರಂಗಮಂದಿರದಲ್ಲಿ ರೋಟರಿ ಕ್ಲಬ್‌ ಆಫ್‌ ಬೀದರ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳು, ಅಭಿಯಂತರರು ಹಾಗೂ ಸಾಧಕ ಶಿಕ್ಷಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ನಿತ್ಯದ ಕರ್ತವ್ಯ, ವೈಯಕ್ತಿಕ ಕೆಲಸ ಕಾರ್ಯಗಳ ನಡುವೆಯೂ ಸಮಾಜ ಸೇವೆಗಾಗಿ ಒಂದಿಷ್ಟು ಸಮಯ ಕೊಟ್ಟರೆ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯ. ರೋಟರಿ ಕ್ಲಬ್‌ ನಡೆಸುವ ಸಾಮಾಜಿಕ ಸೇವಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ರೋಟರಿ ಕ್ಲಬ್‌ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದ 200 ದೇಶಗಳಲ್ಲಿ ರೋಟರಿ ಸಂಸ್ಥೆಗಳು ಕೆಲಸ ಮಾಡುತ್ತಿದ್ದು, 12 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಪೋಲಿಯೋ ನಿರ್ಮೂಲನೆ ಸೇರಿ ವಿವಿಧ ಸಮಸ್ಯೆ ನಿವಾರಿಸುವಲ್ಲಿ ರೋಟರಿ ಪಾತ್ರ ಹಿರಿದಾಗಿದೆ. ಬರುವ ದಿನಗಳಲ್ಲಿ ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಗುಲಬರ್ಗಾ ವಿವಿ ಸಿಂಡಿಕೇಟ್‌ ಸದಸ್ಯ ಪ್ರತಿಭಾ ಚಾಮಾ ಮಾತನಾಡಿ, ಶೈಕ್ಷಣಿಕವಾಗಿ ಬೀದರ ಅಭಿವೃದ್ಧಿ ಹೊಂದುತ್ತಿರುವುದು ಸಂತಸದ ಸಂಗತಿ. ಅನೇಕ ಶಿಕ್ಷಣ ಸಂಸ್ಥೆಗಳ, ಶಿಕ್ಷಕರ ಕಾರ್ಯ ಸ್ಮರಣೀಯ. ನಮ್ಮಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ಸಿಕ್ಕರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ರೋಟರಿ ಕಲ್ಯಾಣ ಝೋನ್‌ ಸಹಾಯಕ ಗವರ್ನರ್‌ ಡಾ| ಜಗದೀಶ ಪಾಟೀಲ, ಹಿರಿಯ ರೋಟೆರಿಯನ್‌ ಕೆ.ಸಿ. ಸೇನನ್‌, ಬಸವರಾಜ ಧನ್ನೂರ್‌, ಪ್ರಕಾಶ ಟೊಣ್ಣೆ, ಇಂಜಿನಿಯರ್‌ಅಸೋಸಿಯೇಷನ್‌ ಅಧ್ಯಕ್ಷ ರವಿ ಮೂಲಗೆ, ರೋಟರಿ ಕಾರ್ಯದರ್ಶಿ ರಂಜೀತ ಪಾಟೀಲ, ಕೋಶಾಧ್ಯಕ್ಷ ಭಗವಂತಪ್ಪ ಇತರರಿದ್ದರು.