ಸೇವೆಯಿಂದ ಸಿಗುವ ತೃಪ್ತಿಭಾವ ಶ್ರೇಷ್ಠ

ಶಿವಮೊಗ್ಗ.ಏ.೧: ದಾನ ಹಾಗೂ ಸೇವೆಯಿಂದ ಸಿಗುವ ತೃಪ್ತಿ ಭಾವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವು ಅನುಭವಿಸುವ ಶ್ರೇಷ್ಠ ಭಾವನೆ. ನಾವು ಗಳಿಸುವ ಸಂಪಾದನೆಯಲ್ಲಿ ಸ್ವಲ್ಪ ಪ್ರಮಾಣವನ್ನು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ನೆರವು ನೀಡಲು ಸದ್ವಿನಿಯೋಗ ಮಾಡಬೇಕು ಎಂದು ಜಿಲ್ಲಾ ಮಾಜಿ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು.
ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ರೋಟರಿ ಮಿಡ್‌ಟೌನ್ ಸದಸ್ಯರು, ರೋಟರಿ ಮಿಡ್‌ಟೌನ್ ಚಾರಿಟಿ ಫೌಂಡೇಷನ್ ಹಾಗೂ ದಾನಿಗಳ ಸಹಕಾರದಿಂದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ 100 ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು. ಆರ್ಥಿಕವಾಗಿ ಸೌಲಭ್ಯ ಪಡೆದಿರುವ ಮಹಿಳೆಯರು ಹೊಲಿಗೆ ಯಂತ್ರದ ಸದುಪಯೋಗ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಶಕ್ತರಾದರೆ ಕುಟುಂಬವು ಸದೃಢವಾಗುತ್ತದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆ ಹೊಂದಿದ್ದು, ವಿಶ್ವಾದ್ಯಂತ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಸೇವಾ ಕ್ಷೇತ್ರ ಹಾಗೂ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಮಹಿಳಾ ಸಬಲೀಕರಣಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದರು.ರೋಟರಿ ಜಿಲ್ಲಾ ಯೋಜನೆ ಚೇರ‍್ಮನ್ ಡಿ.ಸುರೇಶ್ ಮಾತನಾಡಿ, ಸೇವೆ ಮಾಡುವುದರಲ್ಲಿ ಸಿಗುವ ಭಾವನೆ ಎಲ್ಲಿಯೂ ಸಿಗುವುದಿಲ್ಲ. ನಾವು ಮಾಡುವ ಸೇವೆಯು ನಿಜವಾದ ಫಲಾನುಭವಿಗಳಿಗೆ ತಲುಪಬೇಕು ಎಂದು ಹೇಳಿದರು.
ರೋಟರಿ ಮಿಡ್‌ಟೌನ್ ಕ್ಲಬ್ ಅಧ್ಯಕ್ಷೆ ವೀಣಾ ಸುರೇಶ್ ಮಾತನಾಡಿ, ರೋಟರಿ ಸಂಸ್ಥೆಯು ಸೇವೆ ಮಾಡಲು ಅವಕಾಶ ಕಲ್ಪಿಸಿದ್ದು, ನನ್ನ ಅಧ್ಯಕ್ಷರ ಅವಧಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಸೇವಾ ಕಾರ್ಯಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.ಸಮಾರಂಭದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಸಹ ಕಾರ್ಯದರ್ಶಿ ಚಂದ್ರಿಕಾ ಗಿರಿಮಾಜಿ, ಎಚ್‌ಪಿಸಿ ಶಿವಪ್ರಸಾದ್, ಮಿಡ್‌ಟೌನ್ ಕಾರ್ಯಕಾರಿ ಮಂಡಳಿ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.