ಸೇವೆಯಲ್ಲಿ ನಿಜವಾದ ಸಾರ್ಥಕತೆ ಇದೆ: ಜ್ಯೋತಿರ್ಮಯಾನಂದ ಶ್ರೀಗಳು

ಬೀದರ: ಸೆ.25:ಸೇವೆಯಲ್ಲೇ ಜೀವನದ ನಿಜವಾದ ಸಾರ್ಥಕತೆ ಇದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ನುಡಿದರು.

ಇಲ್ಲಿಯ ಮೈಲೂರು ಕ್ರಾಸ್‍ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಹೇಡೆ ಶೈಕ್ಷಣಿಕ, ಸಾಹಿತ್ತಿಕ ಹಾಗೂ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಕೊಡಲಾಗುವ ರಾಜ್ಯಮಟ್ಟದ ವಿ.ಎಸ್. ಮಠ ಕನ್ನಡ ಭಾಷಾ ಬೋಧಕ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ನಮಗೆ ದೊರೆತ ಅವಕಾಶವನ್ನು ಬಳಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಚನ್ನಬಸವ ಹೇಡೆ ದತ್ತಿ ನಿಧಿಯ 10 ಸಾವಿರ ನಗದು ಪುರಸ್ಕಾರ, ಫಲಕದೊಂದಿಗೆ ರಾಜ್ಯಮಟ್ಟದ ವಿ.ಎಸ್. ಮಠ ಭಾಷಾ ಬೋಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಬುರ್ಗಿಯ ಶರಣ ಸಾಹಿತಿ, ಶಿಕ್ಷಕ ಮಹಾಂತೇಶ ಕುಂಬಾರ, ನಾನು, ನನ್ನದು ಎನ್ನುವುದಕ್ಕಿಂತ ಎಲ್ಲರೂ ನನ್ನವರು ಎನ್ನುವ ವಿಶ್ವಮಾನವ ದೃಷ್ಟಿಕೋನ ಬೆಳೆಸಿಕೊಂಡರೆ ಮಾತ್ರ ಬದುಕು ಶ್ರೇಷ್ಠವಾಗಬಲ್ಲದು ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣಾಧಿಕಾರಿ ಟಿ. ಆರ್. ದೊಡ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಶಿವಲಿಂಗ ಹೇಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಸಾಹಿತಿ ಶಿವಕುಮಾರ ಕಟ್ಟೆ, ಕನ್ನಡ ಸಾಹಿತ್ಯ ಸಂಘದ ಗೌರವಾಧ್ಯಕ್ಷ ಬಸವರಾಜ ಬಲ್ಲೂರ, ಶಿಕ್ಷಕಿ ರೇಣುಕಾ ವಿ.ಎಸ್. ಮಠ್, ಮನ್ಮಥಪ್ಪ ಹೇಡೆ, ಚನ್ನಬಸವ ಹೇಡೆ ಉಪಸ್ಥಿತರಿದ್ದರು.