ಬೀದರ್: ಜು.7:ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಗುರುನಾನಕ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಡಾ. ಶಾಮಲಾ ವಿ. ದತ್ತಾ ಹೇಳಿದರು.
ಬೀದರ್‍ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎ ಹಾಗೂ ಬಿ ಘಟಕಗಳ
ವತಿಯಿಂದ ತಾಲ್ಲೂಕಿನ ವಾಲ್ಡೊಡ್ಡಿಯ ಬುದ್ಧ ವಿಹಾರದಲ್ಲಿ ಹಮ್ಮಿಕೊಳ್ಳಲಾದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯು ಜೀವನ ಮೌಲ್ಯ ಕಲಿಸುತ್ತದೆ. ದೇಶ ಭಕ್ತಿ, ದೇಶಾಭಿಮಾನ ಮೂಡಿಸುತ್ತದೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ. ಮನೋಜಕುಮಾರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜ ಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಸ್ವಚ್ಛ ಹಾಗೂ ಸುಂದರ ಗ್ರಾಮಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಎ ಘಟಕದ ಅಧಿಕಾರಿ ಪ್ರೊ. ಶ್ರೀನಿವಾಸ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೇವಿ ಧನರಾಜ, ಭಾನುಬೀ ಮತ್ತಿತರರು ಉಪಸ್ಥಿತರಿದ್ದರು.
ಡಾ. ಶ್ರೀಕಾಂತ ಪಾಟೀಲ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಬಿ ಘಟಕದ ಅಧಿಕಾರಿ ಡಾ. ವಿದ್ಯಾ ಪಾಟೀಲ ಸ್ವಾಗತಿಸಿದರು. ಡಾ. ರಾಜಕುಮಾರ ಹೊಸದೊಡ್ಡೆ ವಂದಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.