
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.5;. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕಗಳಿಸಿದರಷ್ಟೆ ಸಾಲದು, ಗೃಹ ಕೃತ್ಯಗಳಲ್ಲೂ ಸ್ವಾವಲಂಬಿಗಳಾಗುವ ತರಬೇತಿಯೂ ಅವರಿಗೆ ಬೇಕು, ಇದರಿಂದ ಬದುಕಿನ ನೈಜ ಪರಿಚಯ ಅವರಿಗಾಗುತ್ತದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದಾವಣಗೆರೆ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ್ ಚಿಗಟೇರಿ ಅಭಿಪ್ರಾಯಪಟ್ಟರು. ಅವರು ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ ಎಂದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ ನೂತನ ಉಪಾಧ್ಯಕ್ಷರಾದ ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್ ಮಾತನಾಡಿ ಸಾಂಘಿಕ ಬದುಕು,ಉತ್ತಮ ನಾಯಕತ್ವ ಹಾಗೂ ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕವಾಗಿದ್ದು ಇಂಗ್ಲೆಂಡಿನ ರಾಬರ್ಟ್ ಬೇಡೆನ್ ಪೊವೆಲ್ ರವರು 1907ರಲ್ಲಿ ಬ್ರೌನ್ ಸೀ ದೀಪದಲ್ಲಿ ಕೇವಲ 20 ವಿದ್ಯಾರ್ಥಿಗಳಿಂದ ಪ್ರಾರಂಭ ಮಾಡಿದ ಸ್ಕೌಟ್ ಶಿಬಿರವು ಈಗ ವಿಶ್ವದ ಸುಮಾರು 174 ರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಮಾರು 5 ಕೋಟಿ 70 ಲಕ್ಷದಷ್ಟು ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯತ್ವವಿದ್ದು ಭಾರತದಲ್ಲಿ ಸುಮಾರು 15 ಲಕ್ಷದಷ್ಟು ಸದಸ್ಯತ್ವವಿದೆ,ಇದರಲ್ಲಿ ಕರ್ನಾಟಕದಲ್ಲೇ ಸುಮಾರು 2,35,000 ದಷ್ಟು ಸದಸ್ಯತ್ವ ವಿದ್ದು ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಚಟುವಟಿಕೆಗಳು ನಡೆಯುತ್ತಿದೆ ಎಂದರಲ್ಲದೆ ಕೀರ್ತಿ ಶೇಷ ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ, ಕೊಂಡಜ್ಜಿ ಬಸಪ್ಪ, ಚಿಗಟೇರಿ ಜಯಣ್ಣ ಮುಂತಾಗಿ ಅನೇಕರು ಸ್ಕೌಟ್ಸ್ ಗಾಗಿ ಮಾಡಿದ ಸತ್ಕಾರ್ಯಗಳನ್ನು ಸ್ಮರಿಸಿದರು.ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿಯವರು ಮಾತನಾಡಿ ಶಾಲಾ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಅವರ ಶೈಕ್ಷಣಿಕ ಒತ್ತಡಗಳಿಗೆ ತುಸು ಪರಿಹಾರ ಪಡೆಯುವುದರ ಜೊತೆಗೆ ಶೈಕ್ಷಣಿಕ ಸಾಧನೆಗೆ ಮತ್ತಷ್ಟು ಹುಮ್ಮಸ್ಸನ್ನು ಪಡೆಯಬಹುದಾಗಿದೆ ಎಂದರಲ್ಲದೇ ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಬಿರಗಳ ಸಹಕಾರಿಯಾಗಿದ್ದು ಜಿಲ್ಲಾ ಸಂಸ್ಥೆಯಿಂದ ನಗರದಲ್ಲಿ ನಿರ್ಮಾಣವಾಗಿರುವ ನೂತನ ಸ್ಕೌಟ್ ಭವನವು ಇದಕ್ಕೆ ಪೂರಕವಾಗಿದೆ ಎಂದರು. ಮತ್ತೋರ್ವ ಉಪಾಧ್ಯಕ್ಷ ಎ. ಮಹಾಲಿಂಗಪ್ಪ ಮಾತನಾಡಿ ಪ್ರತಿ ಕುಟುಂಬದ ಸದಸ್ಯರೂ ತಮ್ಮ ಮಕ್ಕಳನ್ನು ಸ್ಕೌಟ್ಸ್ ಗೆ ಕಳಿಸಬೇಕು, ಶಿಬಿರಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಬೇಕು ಎಂದರು.ಜಿಲ್ಲಾ ಆಯುಕ್ತ ಎ ಪಿ ಷಡಕ್ಷರಪ್ಪ ಮಾತನಾಡಿ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವ ಶಿಕ್ಷಣವು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ದೊರೆಯುತ್ತದೆ, ಮಕ್ಕಳು ದೇಶದ ಶ್ರೇಷ್ಠ ಪ್ರಜೆಗಳಾಗಲು ಇದು ಸಹಕಾರಿ ಎಂದರು.ಗೈಡ್ಸ್ ಆಯುಕ್ತೆ ಶಾರದಾ ಮಾಗಾನಹಳ್ಳಿ ಮಾತನಾಡಿ ದೇಶದ ಮುಂದಿನ ಸಂಪತ್ತಾದ ಮಕ್ಕಳಿಗೆ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನೂ ನೀಡಬೇಕು ಎಂದರು. ಗೌರವಾಧ್ಯಕ್ಷ ಮಹಮ್ಮದ್ ವಾಸಿಲ್ ಮಾತನಾಡಿ ಪ್ರಕೃತಿ ಮತ್ತು ಪರಿಸರದ ಮಹತ್ವವನ್ನು ಶಿಬಿರಗಳಲ್ಲಿ ತಿಳಿಸಲಾಗುತ್ತಿದೆ ಎಂದರು. ಉಪಾಧ್ಯಕ್ಷರುಗಳಾದ ಮಂಗಳಾ ವಿಶ್ವನಾಥ್, ಶಾಂತಾ ಯಾವಗಲ್ ಉಪಸ್ಥಿತರಿದ್ದು ಅಶ್ವಿನಿ ಜೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ರತ್ನಾ ಎಂ ಸ್ವಾಗತ ಕೋರಿದರು. ಖಜಾಂಚಿ ಬೂಸ್ನೂರ್ ವಿಶ್ವನಾಥ್ ಲೆಕ್ಕಪತ್ರಗಳ ಮಂಡನೆ ಮಾಡಿ ಸಭೆಯ ಅನುಮೋದನೆ ಪಡೆದರು. ಮುಂದಿನ ವಾರ್ಷಿಕ ಚಟುವಟಿಕೆಯ ವಿಷಯ ಮಂಡನೆಯನ್ನು ಸಹಕಾರ್ಯದರ್ಶಿ ಸಿದ್ದೇಶ್ ಮಾಡಿದರು. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಲಪ್ಪ ರವರನ್ನು ಅಭಿನಂದಿಸಲಾಯಿತು. ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ಸ್ಕೌಟ್ ಭವನದ ನೂತನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆಗಳ, ಜಿಲ್ಲಾ ಸಂಸ್ಥೆಗಳ ಪದಾಧಿಕಾರಿಗಳು ಎ ಡಿ ಸಿ ಗಳು ಮುಂತಾದವರು ಉಪಸ್ಥಿತರಿದ್ದರು.