ಸೇವಾ ಮನೋಭಾವ ಪತ್ರಿಕೋದ್ಯಮದ ಆಶಯ:ತಗಡೂರು

ಮಾಧ್ಯಮ ಏನು, ಎತ್ತ? ಸಂವಾದ ಕಾರ್ಯಕ್ರಮ

ಕಲಬುರಗಿ,ಆ14 : ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಸೇವೆ ಮತ್ತು ಸೇವಾ ಮನೋಭಾವದಿಂದ ಪತ್ರಿಕೆಗಳನ್ನು ನಡೆಸಲಾಗುತ್ತಿತ್ತು. ಮಹಾತ್ಮಗಾಂಧಿ, ಬಾಲಗಂಗಾಧರ ತಿಲಕ್, ಡಾ. ಬಿ.ಆರ್. ಅಂಬೇಡ್ಕರ್ ಅವರು ಪತ್ರಿಕೆಗಳನ್ನು ಬದ್ಧತೆಯಿಂದ ನಡೆಸಿಕೊಂಡು ಬಂದಿದ್ದರು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ “ಮಾಧ್ಯಮ ಏನು, ಎತ್ತ?” ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕಾಲಾನುಕ್ರಮವಾಗಿ ನಾವು ಅಪ್ ಡೇಟ್ ಆಗಬೇಕಿದೆ. ಅಂದಾಗ ಮಾತ್ರ ಪತ್ರಿಕೋದ್ಯಮದ ಘನತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯ ಪೂರ್ವದ ನಂತರ 90ರ ದಶಕದಲ್ಲಿ ಮಾಧ್ಯಮ ತನ್ನ ಮಗ್ಗಲು ಬದಲಾಯಿಸಿಕೊಂಡಿದ್ದು, ಪ್ರಿಂಟ್, ಎಲೆಕ್ಟ್ರಾನಿಕ್, ಡಿಜಿಟಲ್ ಮೀಡಿಯಾ ಮಧ್ಯೆ ಸತ್ಯ ಸುದ್ದಿಗಳನ್ನು ಹೆಕ್ಕಿ ತೆಗೆಯುವ ಸವಾಲಿನ ಕೆಲಸ ಮಾಡಬೇಕಿದೆ ಎಂದರು.
ಪತ್ರಕರ್ತರಾದವರು ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆಗದಿದ್ದರೆ ಕಳೆದು ಹೋಗುವ ಸಾಧ್ಯತೆಗಳಿವೆ. ಇಂದಿನ ಅನೇಕ ಸಮಸ್ಯೆ ಹಾಗೂ ಸವಾಲುಗಳ ಮಧ್ಯೆ ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಮಾಧ್ಯಮ ರಂಗಕ್ಕೆ ಕೊಡುಗೆ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಸಂಘದ ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮುಂಚೆ ಬಹಳ ಪೆÇ್ರಫೆಷನಲ್ ಮತ್ತು ಫ್ಯಾಸಿನೇಟ್ ಆಗಿದ್ದ ಮಾಧ್ಯಮ ಕ್ಷೇತ್ರ ಕವಲು ದಾರಿಯಲ್ಲಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಇಂದು ಸಾಕಷ್ಟು ಅವಕಾಶಗಳಿವೆ ಎಂದು ನುಡಿದರು.ಮಾಧ್ಯಮದಲ್ಲಾಗಲಿ ಅಥವಾ ಬದುಕಿನಲ್ಲಾಗಲಿ ಒಮ್ಮೆಲೆ ಸ್ಪೇಸ್ ಸಿಗುವುದಿಲ್ಲ. ನಾವು ಅಂತಹ ಸ್ಪೇಸ್ ನಿರ್ಮಾಣ ಮಾಡಿಕೊಳ್ಳಲು ವಿಫುಲ ಅವಕಾಶಗಳಿರುತ್ತವೆ ಎಂದರು.
ಹಿರಿಯ ಪತ್ರಕರ್ತರಾದ ಎಸ್.ಬಿ. ಜೋಶಿ, ಶಿವರಾಯ ದೊಡ್ಡಮನಿ, ಡಿ. ಶಿವಲಿಂಗಪ್ಪ, ಶರಣಬಸವ ಜಿಡಗೆ,ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ಸ್ವಾಗತಿಸಿದರು. ಉಪಾಧ್ಯಕ್ಷ ಸುರೇಶ್ ಬಡಿಗೇರ ನಿರೂಪಿಸಿದರು. ಪತ್ರಕರ್ತ ಬಾಬುರಾವ್ ಕೋಬಾಳ ಪ್ರಾರ್ಥಿಸಿದರು.ಪತ್ರಕರ್ತರಾದ ಸುಭಾಷ್ ಬಣಗಾರ, ಮನೋಜಕುಮಾರ ಗುದ್ದಿ, ಶರಣು ಗೊಬ್ಬುರ, ಶರಣಯ್ಯ ಹಿರೇಮಠ, ರಾಜು ಕೋಷ್ಠಿ, ಅನಿಲ್ ಸ್ವಾಮಿ, ಹಣಮಂತರಾವ್ ಭೈರಾಮಡಗಿ ಇತರರಿದ್ದರು.