ಸೇವಾ ಮನೋಭಾವದಿಂದ ಸಮಾಜದ ಉನ್ನತೀಕರಣಕ್ಕೆ ಶ್ರಮಿಸಿ: ಡಾ. ಜಾವಿದ ಜಮಾದಾರ

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.15:ಯುವ ಜನಾಂಗ ಆಶೆ, ಆಮಿಷಗಳಿಗೆ ಬಲಿಯಾಗಿ ಆಧುನಿಕ ಜೀವನ ಶೈಲಿಗೆ ಮಾರುಹೋಗದೆ ಸ್ವಾರ್ಥ ಭಾವನೆ ಬಿಟ್ಟು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಾಯಕತ್ವ ಶಿಸ್ತು, ಧೈರ್ಯ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಉನ್ನತಿಕರಣಕ್ಕೆ ಶ್ರಮಿಸಬೇಕೆಂದು ರಾಷ್ಟ್ರಪ್ರಶಸ್ತಿ ಪುರಸ್ಕøತ ಹಾಗೂ ಕರ್ನಾಟಕ ರಾಜ್ಯ ಎನ್.ಎಸ್.ಎಸ್. ಸಲಹಾ ಸಮಿತಿ ಸದಸ್ಯ ಡಾ. ಜಾವಿದ ಜಮಾದಾರ ಅಭಿಪ್ರಾಯಪಟ್ಟರು.
ಗುರುವಾರ ನಗರದ ರಾಮಕೃಷ್ಣ ಪರಮಹಂಸ ಆಶ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಎನ್.ಎಸ್.ಎಸ್. ಕೋಶ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಬಿ.ಎಲ್.ಡಿ.ಈ. ಸಂಸ್ಥೆಯ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಬಿ.ಎಲ್.ಡಿ.ಈ. ಸಂಸ್ಥೆಯ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಏಳು ದಿನಗಳ ಪೌರತ್ವ ಶಿಬಿರ ಹಾಗೂ ಎನ್.ಎಸ್.ಎಸ್. ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸೇವೆ, ತ್ಯಾಗ, ಸಹಕಾರ, ಸೌಹಾರ್ದ ಮುಂತಾದ ಗುಣಗಳು ಯುವಕರಲ್ಲಿದ್ದಾಗ ವಿಶಾಲ ಮನೋಭಾವ ಬೆಳೆದು ವೈವಿಧÀ್ಯಮಯ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ಕಂಡ ಕನಸನ್ನು ನನಸು ಮಾಡಲು ಯುವ ಜನಾಂಗ ಪಣತೊಡಬೇಕಿದೆ. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವ ಸಮಯದಲ್ಲಿ ಗೊಂದಲದಿಂದ ಹೊರಬರಬೇಕು. ಅತಿಯಾದ ಆತ್ಮವಿಶ್ವಾಸ ತೊರೆದು ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಸಮಾಜ ಸೇವೆಗೈಯ್ಯಬೇಕೆಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಬಿ.ಎಲ್.ಡಿ.ಈ. ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಡಾ. ಆರ್.ಬಿ. ಕೊಟ್ನಾಳ ಮಾತನಾಡಿ, ಡಾ. ಫ.ಗು. ಹಳಕಟ್ಟಿ ಅವರ ನೈಜ ಭಾಷಣವನ್ನು ಎಲ್ಲಾ ವಿದ್ಯಾರ್ಥಿಗಳು ಓದಬೇಕಾಗಿದೆ. ವಿದ್ಯಾರ್ಥಿಗಳು ಯಾವಾಗಲೂ ಪುಸ್ತಕ ಪ್ರೇಮಿಯಾಗಬೇಕು. ಇದರಿಂದ ಹೆಚ್ಚಿನ ಜ್ಞಾನ ದೊರೆಯುತ್ತದೆ. ಅದರ ಜೊತೆಗೆ ದುಶ್ಚಟಗಳಿಗೆ ದಾಸರಾಗಬಾರದು. ಸಮಾಜದಲ್ಲಿದ್ದಂತಹ ಅನಿಷ್ಠ ಪದ್ದತಿಗಳ ನಿರ್ಮೂಲನೆಗಾಗಿ ಶ್ರಮಿಸಬೇಕೆಂದರು.
ಬಿ.ಎಲ್.ಡಿ.ಈ. ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಐ.ಎಸ್. ಕಾಳಪ್ಪನವರ ಮಾತನಾಡಿ, ವಿದ್ಯಾರ್ಥಿಗಳ ಏಳ್ಗೆಗಿಂತ ದೊಡ್ಡ ಉಡುಗೊರೆ ಇಲ್ಲ. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ನೀಡುವ ದೊಡ್ಡ ಗೌರವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಡಾ. ಪ್ರಕಾಶ ರಾಠೋಡ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜೆ.ಎಸ್.ಎಸ್. ಮಹಾವಿದ್ಯಾಲಯದ ಪ್ರಾಚಾರ್ಯೆ ಬಿ.ವಾಯ್. ಕಾಸನೀಸ ಮಾತನಾಡಿದರು.