ಸೇವಾ ನಿವೃತ್ತ ಮುಖ್ಯ ಶಿಕ್ಷಕಿಗೆ ವಿದಾಯಕೂಟ

ಪುತ್ತೂರು, ಜೂ.೨- ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಕಳೆದ ೩೧ ವರ್ಷ ಕನ್ನಡ ಶಿಕ್ಷಕಿಯಾಗಿ ೪ ವರ್ಷ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ರೂಪಕಲಾ ಕೆ ಅವರ  ವಿದಾಯ ಸಮಾರಂಭ ಕೊರೊನಾ ನಿಯಮ ಪಾಲನೆಯೊಂದಿಗೆ ಸೋಮವಾರ ನಡೆಯಿತು.

  ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ,  ಸಮರ್ಪಣಾ ಭಾವದಿಂದ ಭಾಷಾ ಬೋಧನೆಯನ್ನು ಮಾಡುವ ರೂಪಕಲಾ ಅವರ ರೀತಿ ಅನನ್ಯವಾದುದು, ಎಲ್ಲರಲ್ಲೂ ಹೊಂದಾಣಿಕೆಯಿಂದ ಸಂಸ್ಥೆಯ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಅವರ ಕರ್ತವ್ಯಪರತೆಗೆ ಸಾಕ್ಷಿಯಾಗಿದೆ ಎಂದರು.

ಮಾಜಿ ಸಂಚಾಲಕರಾದ ಸವಣೂರು ಸೀತಾರಾಮ ರೈ ಅವರು ಮಾತನಾಡಿ, ತನ್ನ ಅವಧಿಯಲ್ಲಿ ಸಂಸ್ಥೆಯ ಸಾಧನೆಗಳನ್ನು ಗಮನಿಸಿದ್ದೇನೆ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವಲ್ಲಿ  ರೂಪಕಲಾ ರವರು ಸಾಕಷ್ಟು ಶ್ರಮಿಸಿದ್ದಾರೆ. ಈಗಿನ ಉತ್ತಮ ಹೆಸರನ್ನು ಉಳಿಸಿಕೊಳ್ಳಲು ಪರಿಶ್ರಮ ಪಡಬೇಕು ಎಂದು ತಿಳಿಸಿದರು.

ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸಲಿ ರುವ ಜಯಲಕ್ಷ್ಮಿ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ ಶ್ರೀಪ್ರಕಾಶ್, ಶಿಕ್ಷಕಿ ಗಾಯತ್ರಿ ಮಾತನಾಡಿದರು.  ಸೇವಾ ನಿವೃತ್ತಿ ಹೊಂದಿದ ರೂಪಕಲಾ ಅವರು ಮಾತನಾಡಿ ತಾನು ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆ ನೀಡಿದ ಪ್ರೋತ್ಸಾಹವೇ ಕಾರಣ ಎಂದರು.

 ಶಾಲಾ ಆಡಳಿತ ಮಂಡಳಿಯ ಸದಸ್ಯೆ ಮಲ್ಲಿಕಾ ಪ್ರಸಾದ್ ಭಂಡಾರಿ, ಚಂದ್ರಹಾಸ ರೈ ನಡುಬೈಲು, ಜಯಪ್ರಕಾಶ್ ರೈ ನೂಜಿಬೈಲು, ರಮೇಶ್ ರೈ ಸಾಂತ್ಯ,  ನಿರಂಜನ ರೈ ಮಠಂತಬೆಟ್ಟು, ದುರ್ಗಾಪ್ರಸಾದ್ ರೈ ಕುಂಬ್ರ, ಜಿಪಂ ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.  ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಎಂ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಸಂಧ್ಯಾ ಕೆ ವಂದಿಸಿದರು.    ಕಾರ್ಯಕ್ರಮದಲ್ಲಿ ರೂಪಕಲಾ ಕೆ ಮತ್ತು ಅವರ ಪತಿ ಜಗನ್ನಾಥ ರೆ ಕೆ  ಅವರನ್ನು ಅಭಿನಂದಿಸಲಾಯಿತು.