ಸೇವಾ ನಿವೃತ್ತರನ್ನು ಗೌರವಿಸುವುದು ಉತ್ತಮ ಸಂಸ್ಕೃತಿ

ಕೋಲಾರ, ಆ.೨- ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ಗೌರವಿಸುವುದು ಉತ್ತಮ ಸಂಸ್ಕೃತಿಯಾಗಿದೆ ಎಂದು ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಸರ್ವಜ್ಞ ಪಾರ್ಕ್ ನಲ್ಲಿ ಸೋಮವಾರ ಗೋಕುಲ ಮಿತ್ರ ಬಳಗ ವತಿಯಿಂದ ಸೋಮವಾರ ನಡೆದ ವಿವಿಧ ಇಲಾಖೆಗಳಲ್ಲಿ ನಿವೃತ್ತಿ ಹೊಂದಿದ ನೌಕರರನ್ನು ಅಭಿನಂದಿಸಿ ಮಾತನಾಡಿದ ಅವರು, ನೌಕರರಿಗೆ ನಿವೃತ್ತಿ ಕಡ್ಡಾಯ ವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಿವೃತ್ತಿಯಾಗಿರುವ ಎಲ್ಲಾ ಹಿರಿಯ ಜೀವಿಗಳ ಸೇವೆ, ಅನುಭವ ಸದಾ ಸಾರ್ವಜನಿಕರಿಗೆ ಸಿಗಲಿ ಎಂದು ಹಾರೈಸಿದರು.
ವ್ಯಕ್ತಿ ಸರಕಾರಿ ಸೇವೆಗೆ ಸೇರಿದ ಮೇಲೆ ನಿವೃತ್ತಿ ದಿನಾಂಕವನ್ನು ಅಂದೇ ನಿಗದಿಗೊಂಡಿರುತ್ತದೆ. ಇದರ ನೆನಪಿನಲ್ಲಿಯೇ ನಾವು ಸೇವೆಯನ್ನು ನಿರ್ವಹಿಸುತ್ತಿರುತ್ತೇವೆ. ಆದರೇ ಅಂತಿಮ ದಿನದದಲ್ಲಿಯೇ ಅದರ ಮಹತ್ವ ಅರಿವಾಗಲಿದೆ. ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎಲ್ಲಾ ನೌಕರರು ಇನ್ನೂ ಹೆಚ್ಚಿನ ಆರೋಗ್ಯವನ್ನು ಹೊಂದಿ ಇಲಾಖೆಗಳಿಗೆ ನೆರವಾಗಬೇಕೆಂದು ಹೇಳಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ನಿಮ್ಮೆಲ್ಲರ ಸೇವೆ ಗಮನಾರ್ಹವಾಗಿದೆ. ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ. ವೃತ್ತಿಯಿಂದ ನಿವೃತ್ತಿ ಅನಿವಾರ್ಯ, ನಿವೃತ್ತಿಯವರೆಗೆ ದುಡಿಮೆ ಅನಿವಾರ್ಯ, ಮುಂದಿನ ಜೀವನವನ್ನು ನಮ್ಮದಾಗಿ ಕಳೆಯೋಣ. ಅಚ್ಚುಕಟ್ಟಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೀರಿ. ತಮಗೆ ಬಯಸಿದ್ದು ದೇವರು ಕರುಣಿಸಲಿ ಎಂದು ಶುಭ ಹಾರೈಸಿದರು.
ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ನುಡಿಮುತ್ತುಗಳನ್ನು ತಿಳಿಸಿ ಅರವತ್ತರ ನಂತರ ಹೊಸ ಜೀವನ ಮರಳಿ ಅರಳಬೇಕು, ಆಸರೆಗೊಂದು ಕುಟುಂಬ, ಸ್ನೇಹಿತರು ಇದ್ದರೆ ಬದುಕು ನೆಮ್ಮದಿಯಾಗಿರುತ್ತದೆ ಎಂದು ನುಡಿದರು.
ಗೋಕುಲ ಮಿತ್ರ ಬಳಗದ ಮುನಿವೆಂಕಟ್ ಯಾದವ್ ಮಾತನಾಡಿ, ನಿವೃತ್ತಿ ಎಂಬುವುದು ಅಂತ್ಯವಲ್ಲ ಮತ್ತೊಂದು ಇನ್ನಿಂಗ್ಸ್ ಇದ್ದಂತೆ. ನಿವೃತ್ತಿಯು ಹೊಸ ಆರಂಭದ ಸಮಯ, ನಿಮ್ಮ ಭಾವೋದ್ರೇಕಗಳನ್ನು ಮುಂದುವರಿಸುವ ಸಮಯ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಕಳೆಯುವ ಸಮಯ. ನಿವೃತ್ತಿ ಹೊಂದಿದ ನಿಮ್ಮೆಲ್ಲರ ಜೀವನ ಸುಖಮಯವಾಗಿ, ಆರೋಗ್ಯ ಲಭಿಸಲಿ ಎಂದು ಶುಭ ಹಾರೈಸಿದರು.