ಸೇವಾ ದಕ್ಷತೆಯಿಂದ ಸಂಸ್ಥೆಗೆ ಕೀರ್ತಿ: ಮಿರ್ಜಿ

ಕಲಬುರಗಿ:ಎ.28: ಸಿಬ್ಬಂದಿ ವರ್ಗದ ಸೇವಾದಕ್ಷತೆ ಪ್ರಾಮಾಣಿಕತೆ ಮತ್ತು ಬದ್ಧತೆ ಸಂಸ್ಥೆಗೆ ಕೀರ್ತಿ ತರುತ್ತದೆ ಎಂದು ಆಕಾಶವಾಣಿಯ ಮುಖ್ಯಸ್ಥರಾದ ಶ್ರೀ ಸಂಜೀವ್ ಕುಮಾರ್ ಮಿರ್ಜಿ ಅವರು ಹೇಳಿದರು.

ಕಲ್ಬುರ್ಗಿ ಆಕಾಶವಾಣಿಯಲ್ಲಿ ಏಪ್ರಿಲ್ 27ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಆಕಾಶವಾಣಿ ಮತ್ತು ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥರಾದ ಪ್ರಕಾಶ್ ಮುಜುಂದಾರ್ ಮತ್ತು ಆಕಾಶ ವಾಣಿಯ ಸ್ವಚ್ಛತಾ ವಿಭಾಗದ ಸಿಬ್ಬಂದಿ ಶ್ರೀಮತಿ ಸುಮಿತ್ರಾ ಬಾಯಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಸಂಸ್ಥೆಯಲ್ಲಿ ಯಾವ ಹುದ್ದೆಯಲ್ಲಿದ್ದರೂ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿ ಹುದ್ದೆಗೆ ಕೀರ್ತಿಯನ್ನು ತರುವುದಲ್ಲದೆ ಸಮಾಜದಲ್ಲಿ ಆ ಸಂಸ್ಥೆ ಗುರುತಿಸುವಂಥಾಗುತ್ತದೆ. ಯಾವುದೇ ಹುದ್ದೆ ಮೇಲು ಅಥವಾ ಕೀಳು ಅಲ್ಲ .ಆದರೆ ವೃತ್ತಿ ಗೌರವವನ್ನು ಕಾಪಾಡುವುದು ಎಲ್ಲರ ಹೊಣೆ. ಕಲಬುರ್ಗಿಯಲ್ಲಿ ಈ ಇಬ್ಬರ ಸೇವೆಯು ಕೂಡ ಸ್ಮರಣೀಯವಾಗಿದೆ ಎಂದು ಅವರು ಹೇಳಿದರು. ಕಲ್ಬುರ್ಗಿ ಆಕಾಶವಾಣಿಯ ಹಿರಿಯ ಕಾರ್ಯಕ್ರಮ ಅಧಿಕಾರಿ ಡಾ. ಸದಾನಂದ ಅವರು ಮಾತನಾಡಿ ನಿವೃತ್ತಿಯ ನಂತರ ಪ್ರವೃತ್ತಿಯನ್ನು ಬೆಳೆಸಿ ಆರೋಗ್ಯವನ್ನು ಕಾಪಾಡಿಕೊಂಡು ಸೃಜನಶೀಲತೆಯೊಂದಿಗೆ ಬದುಕು ಮಾಡುವುದೇ ನಿವೃತ್ತಿಯ ನಂತರದ ದೊಡ್ಡ ಸಾಧನೆ ಎಂದು ಹೇಳಿದರು. ಕಾರ್ಯಕ್ರಮ ನಿರ್ವಹಣಾಧಿಕಾರಿ ಸೋಮಶೇಖರ ಎಸ್ ರುಳಿ ಮಾತನಾಡಿ ಇಬ್ಬರು ಸ್ನೇಹಮಯ ಬದುಕನ್ನು ಮಾಡಿ ಸಂಸ್ಥೆಗೆ ಕೀರ್ತಿಯನ್ನು ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು. ತಾಂತ್ರಿಕ ವಿಭಾಗದ ಪ್ರಭು ನಿಷ್ಟಿಯವರು ಮಾತನಾಡಿ ಕಲ್ಬುರ್ಗಿ ಭಾಗದ ಹೆಸರನ್ನು ದೂರದರ್ಶನದ ಮೂಲಕ ರಾಜ್ಯಕ್ಕೆ ಪಸರಿಸಿದ ಕೀರ್ತಿ ಮುಜುಂದಾರ್ ಗೆ ಸಲ್ಲುತ್ತದೆ ಹಾಗೂ ಸುಮಿತ್ರಾ ಬಾಯಿಯವರು ತನ್ನ ಸೇವೆಯನ್ನು ಗೌರವಯುತವಾಗಿ ನಿರ್ವಹಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ನಂತರ ಪ್ರಕಾಶ್ ಮುಜುಂದಾರ್ ಮಾತನಾಡಿ ದೂರದರ್ಶನ ಮತ್ತು ಆಕಾಶವಾಣಿಯ ಸೇವೆ ತೃಪ್ತಿ ತಂದಿದೆ. ಸವಾಲುಗಳ ಮಧ್ಯೆ ಕೆಲಸ ನಿರ್ವಹಿಸಿ ಕೊಡುಗೆಯನ್ನು ನೀಡಲಾಗಿದೆ ಎಂಬ ಸಾರ್ಥಕ ಭಾವ ಹೊಂದಲಾಗಿದೆ. ನಿವೃತ್ತಿ ಹೊಂದಿದವರಿಗೆ ಶಾಲು ಹಾರ ಮತ್ತು ಸ್ಮರಣೆಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಸಾರ ನಿರ್ವಾಹಕರಾದ ಸಂಗಮೇಶ್ ಹಿರಿಯ ಉದ್ಘೋಷಕರಾದ ಶಾರದಾ ಜಂಬಲದಿನ್ನಿ ತಾಂತ್ರಿಕ ವಿಭಾಗದ ಕುಮಾರ್ ಅಮರಗೊಳ್, ಜಿ.ವಿ ಕುಲಕರ್ಣಿ ಅನಿಲ್ ಕುಮಾರ್, ನಿವೃತ್ತ ಲೆಕ್ಕಾಧಿಕಾರಿ ವಿಜಯಕುಮಾರ್, ಲೆಕ್ಕ ವಿಭಾಗದ ಶೇಷಗಿರಿ, ಶಿವಪುತ್ರಪ್ಪ ಮತ್ತಿತರರು ಉಪಸ್ಥಿತರಿದ್ದರು