ಸೇವಾ ಚಟುವಟಿಕೆಯಿಂದ 1 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನ: ತೆಲ್ಕೂರ

ಕಲಬುರಗಿ,ಜೂ.3- ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು 7ನೇ ವರ್ಷದ ಆಡಳಿತ ಮತ್ತು ಎರಡನೇ ಅವಧಿಯಲ್ಲಿ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮೇ 30ರಂದು ರಾಜ್ಯದ 18,418 ಗ್ರಾಮಗಳಲ್ಲಿ ಸೇವಾ ಚಟುವಟಿಕೆಗಳು ನಡೆದಿವೆ ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ತಿಳಿಸಿದರು
ರಾಜ್ಯದ ಒಟ್ಟು 19 ಲಕ್ಷ ಕಾರ್ಯಕರ್ತರು ಈ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕಳೆದ ಮೇ 30ರಂದು ಪಕ್ಷದ ವತಿಯಿಂದ ನಡೆದ ಸೇವಾ ಚಟುವಟಿಕೆಗಳಿಂದ ಬಡವರು, ನಿರಾಶ್ರಿತರು, ಕಾರ್ಮಿಕರು, ಕೋವಿಡ್ ಪೀಡಿತರು ಮತ್ತು ಕುಟುಂಬಸ್ಥರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಮಂಗಳಮುಖಿಯರು, ಪೌರ ಕಾರ್ಮಿಕರು, ಬಡ ರೈತರು ಮುಂತಾದವರಿಗೆ ಪ್ರಯೋಜನ ಲಭಿಸಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರು, ಮಂತ್ರಿಗಳು, ಸಂಸದರು ಹಾಗೂ ಶಾಸಕರುಗಳು ಕೋವಿಡ್ ಸಂಕಷ್ಟದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಯಾವುದೇ ಪ್ರಚಾರಕ್ಕೆ ಒತ್ತುಕೊಡದೆ ಅತ್ಯಂತ ಮುಖ್ಯವಾಗಿ ಕೋವಿಡ್ ಸೇವಾ ಚಟುವಟಿಕೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅವರು ವಿವರ ನೀಡಿದರು.
ಒಟ್ಟು 23,63,967 ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಗಿದೆ. ಬಡವರಿಗೆ 5 ಕೆಜಿ, 10 ಕೆಜಿ, 25 ಕೆಜಿ ಪಡಿತರ ಇರುವ 4,96,422 ರೇಷನ್ ಕಿಟ್, 13,12,901 ಆಹಾರ ಪೆÇಟ್ಟಣ ವಿತರಿಸಲಾಗಿದೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಪ್ಯಾಕೇಜ್ ಪ್ರಕಟಿಸಿದ ಕಾರಣ ಲಕ್ಷಾಂತರ ಜನರಿಗೆ ಸಹಾಯ ಆಗಿದೆ ಎಂದು ವಿವರಿಸಿದರು.
3,49,151 ಕೋವಿಡ್ ರೋಗ ನಿರೋಧಕ ಕಿಟ್ ವಿತರಣೆ ನಡೆದಿದೆ. ಥರ್ಮಲ್ ಮತ್ತು ಆಕ್ಸಿಮೀಟರ್ ಮೂಲಕ 3,25,919 ಜನರನ್ನು ಪರೀಕ್ಷೆ ಮಾಡಲಾಗಿದೆ. ಕೆಜಿಎಫ್‍ನಲ್ಲಿ 800 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲಾಗಿದೆ. ಕೆಲವೆಡೆ 15ರಿಂದ 20 ದಿನಗಳ ಕಾಲ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸ್ಲಂ ಏರಿಯಾ ಸೇರಿದಂತೆ ರಾಜ್ಯದ ವಿವಿಧೆಡೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ವೈಯಕ್ತಿಕ ನೆರವಿನ 18,525 ಇತರ ಸೇವಾ ಚಟುವಟಿಕೆಗಳೂ ನಡೆದಿವೆ.
ಸೇಡಂ, ಮಂಗಳೂರು ಸೇರಿ 23 ಕೋವಿಡ್ ಸೆಂಟರ್ ತೆರೆಯಲಾಗಿದೆ. 9,026 ಕೋವಿಡ್ ಪೀಡಿತರಿಗೆ ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಶವಸಂಸ್ಕಾರಗಳಲ್ಲಿ ನಮ್ಮ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಭಾಗವಹಿಸಿದ್ದು, ಚಾಮರಾಜನಗರದಲ್ಲಿ 200ಕ್ಕೂ ಹೆಚ್ಚು ಸೇರಿದಂತೆ ರಾಜ್ಯದ ವಿವಿಧೆಡೆ 3,986 ಕೋವಿಡ್ ಪೀಡಿತರ ಶವಸಂಸ್ಕಾರ ಮಾಡಲಾಗಿದೆ. ಅಲ್ಲದೆ ರಾಜ್ಯದ ವಿವಿಧ ಕಡೆಗಳಲ್ಲಿ 4,367 ಸಸಿಗಳನ್ನು ನೆಡಲಾಗಿದೆ ಎಂದರು.
ಕೋವಿಡ್ 19ಗೆ ಕುರಿತಂತೆ 12 ರೀತಿಯ ವಿಶೇಷ ಸೇವಾ ಚಟುವಟಿಕೆಗಳು ನಡೆದಿವೆ. ಆಶಾ ಕಾರ್ಯಕರ್ತೆಯರಿಗೆ ಸನ್ಮಾನ, ಕೋವಿಡ್ ರೋಗಿಗಳ ಕುಟುಂಬಗಳಿಗೆ ಊಟ, ಕೋವಿಡ್ ವಾರಿಯರ್ಸಗಳಿಗೆ ರೇಷನ್ ಕಿಟ್, ಮತ್ತು ಧನ ಸಹಾಯ ವಿತರಣೆ- ಹೀಗೆ ಸೇವಾ ಕಾರ್ಯಗಳನ್ನು ನಡೆಸಲಾಗಿದೆ ಎಂದರು..
ವಿರೋಧ ಪಕ್ಷದವರು ಕೇವಲ ಟೀಕೆ ಟಿಪ್ಪಣಿಗಳಿಗೇ ತಮ್ಮ ಕೆಲಸವನ್ನು ಸೀಮಿತಗೊಳಿಸಬಾರದು. ಉತ್ತಮ ಕಾರ್ಯಗಳನ್ನು ಮೆಚ್ಚುವ ಮನೋಭಾವ ಬೆಳೆಸಿಕೊಳ್ಳಬೇಕು, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೆಲಸಗಳು ಟೀಕೆ ಮತ್ತು ಆರೋಪ ಮಾಡುವ ಪತ್ರಿಕಾಗೋಷ್ಠಿ ಮತ್ತು ಟ್ವಿಟರ್ ಹೇಳಿಕೆಗೇ ಸೀಮಿತವಾಗಿದೆ. ಅವರು ಸೇವೆ ಮಾಡಲು ಕಾರ್ಯಕರ್ತರಿಗೆ ಕರೆ ನೀಡಬೇಕಿತ್ತು ಎಂದರು.
ಆದರೆ, ಬಿಜೆಪಿ ಕಾರ್ಯಕರ್ತರು ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕನಕಪುರದಲ್ಲಿ 450 ಬಾಟಲಿ ರಕ್ತ ಮತ್ತು ರಾಮನಗರ ಜಿಲ್ಲೆಯಲ್ಲಿ ಒಟ್ಟು 1,500ಕ್ಕೂ ಹೆಚ್ಚು ಬಾಟಲಿ ರಕ್ತ ಸಂಗ್ರಹಿಸಿ ಬ್ಲಡ್ ಬ್ಯಾಂಕುಗಳಿಗೆ ನೀಡಲಾಗಿದೆ. ಕೋವಿಡ್ ಅಂತ್ಯ ಆಗುವವರೆಗೆ ಇಂಥ ಸೇವಾಕಾರ್ಯ ಮುಂದುವರಿಯಲಿದೆ ಎಂದು ಅವರು ಹೇಳಿದರು.