ಸೇವಾಲಾಲ ಮಹಾರಾಜರ ದೇವಾಲಯ ನಿರ್ಮಾಣ ಭರವಸೆ

ಕಲಬುರಗಿ,ಏ.19: ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣದ ಬಳಿ ಸೇವಾಲಾಲ ಮಹಾರಾಜರ ದೇವಾಲಯ ನಿರ್ಮಾಣಕ್ಕೆ ರಾಜ್ಯ ಸರಕಾರ ಅಗತ್ಯ ಜಮೀನು ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಂಜಾರ ಸಮುದಾಯದ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಅಖಿಲ ಭಾರತ ಬಂಜಾರ ಧರ್ಮಗಳ ಮಹಾಸಭಾ ಅಧ್ಯಕ್ಷ ಲೋಕೇಶ್ ಮಹಾರಾಜ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣ ನಿರ್ಮಾಣದ ವೇಳೆ ಸೇವಾಲಾಲ ಮಹಾರಾಜರ ದೇವಾಲಯ ಕೆಡವಲಾಗಿತ್ತು. ಈ ವೇಳೆ, ಸಮುದಾಯದ ಎಲ್ಲ ಧರ್ಮಗುರುಗಳು ಶೀಘ್ರ ದೇವಾಲಯ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದಾಗ ಸಂಸದ ಡಾ.ಉಮೇಶ್ ಜಾಧವ್ ಅವರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿ ಶೀಘ್ರ ಸೇವಾಲಾಲ ಮಹಾರಾಜರ ದೇವಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಸಂಸದ ಡಾ.ಜಾಧವ್ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಮಧ್ಯೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಸೇವಾಲಾಲ ಮಹಾರಾಜರ ದೇವಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದು, ಅದಕ್ಕೆ ಅಗತ್ಯ ಭೂಮಿ ಒದಗಿಸುವುದಾಗಿಯೂ ಹೇಳಿದ್ದಾರೆ. ಹೀಗಾಗಿ, ಈ ನಿಟ್ಟಿನಲ್ಲಿ ಹೆಚ್ಚು ಗೊಂದಲಕ್ಕೆ ಒಳಗಾಗದೆ ಸಮುದಾಯದ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡಲು ನಿರ್ಧರಿಸಲಾಗಿದೆ ಎಂದರು.
ಇದೇವೇಳೆ, ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿದರು. ಬೆಡಸೂರಿನ ಸೋನ್ಯಾಲಗಿರಿ ಪರ್ವತಲಿಂಗ ಪರಮೇಶ್ವರ ಮಹಾಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದ ಚವ್ಹಾಣ, ನಾಮದೇವ ರಾಠೋಡ್, ಶಾಮರಾವ್ ಪವಾರ್, ಭೀಮಸಿಂಗ್ ಚವ್ಹಾಣ, ಬಾಬು ಪವಾರ್ ಚೆಂಗಟಾ, ಜಗದೀಶ್ ಚವ್ಹಾಣ, ಮೋಹನ ರಾಠೋಡ್, ನಾರಾಯಣ ಪವಾರ್ ಸೇರಿದಂತೆ ಇತರರಿದ್ದರು.