ಸೇವಾದಳ ಶಿಸ್ತು, ಸೇವಾ ಮನೋಭಾವನೆ ಕಲಿಸುವ ಸಂಘಟನೆ: ವೆಂಕಟನಾಗಪ್ಪಶೆಟ್ಟಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.19:- ಸೇವಾದಳವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವನೆ ಮೂಡಿಸುವ ಹಾಗೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವೃದ್ದಿಸುವ ಸಂಘಟನೆಯಾಗಿದೆ ಎಂದು ಸೇವಾ ದಳದ ಜಿಲ್ಲಾ ಅಧ್ಯಕ್ಷ ಬಿ.ವಿ. ವೆಂಕಟನಾಗಪ್ಪಶೆಟ್ಟಿ (ಬಾಬು) ತಿಳಿಸಿದರು.
ನಗರದ ಜಿಲ್ಲಾ ಸೇವಾ ದಳದ ಕಚೇರಿಯಲ್ಲಿ ಮಾಜಿ ಪ್ರಧಾನಿ ಜವಾಹರಲ್ ನೆಹರು ಅವರ ಜಯಂತಿ ಅಂಗವಾಗಿ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪಥ ಸಂಚಲನದಲ್ಲಿ ದ್ವಿತೀಯ ಬಹುಮಾನ ಪಡೆದ ಸೇವಾದಳ ಪಥ ಸಂಚಲನ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಸೇವಾ ದಳ ರಾಷ್ಟ್ರ ಪ್ರೇಮ ಹಾಗೂ ದೇಶ ಭಕ್ತಿಯನ್ನು ಮೂಡಿಸುವ ಸಂಘಟನೆಯಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಡಾ. ನಾ.ಸು. ಹರ್ಡೀಕರ್ ಅವರ ಸ್ಥಾಪನೆ ಮಾಡಿದ ಸೇವಾದಳ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇಂಥ ಸಂಘಟನೆಯಲ್ಲಿರುವ ತಾವೆಲ್ಲರು ಪುಣ್ಯವಂತರು. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ದೇಶ ಭಕ್ತಿ ಹಾಗೂ ಸೇವಾ ಮನೋಭಾವನೆಯನ್ನು ಮುಡಿಸುವ ನಿಟ್ಟಿನಲ್ಲಿ ಸೇವಾ ದಳ ಶ್ರಮಿಸುತ್ತಿದೆ, ಹಣ ನೀಡುವುದೇ ಸೇವೆ ಅಲ್ಲ. ಎಲ್ಲಾ ವಿಭಾಗದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ಅಬಲರು ಹಾಗು ಅಶಕ್ತರಿಗೆ ಸಹಾಯ ಮಾಡುವುದು ನಿಜವಾದ ಸೇವೆಯಾಗಿದೆ ಎಂದರು.
ಸೇವಾದಳ ವಿದ್ಯಾರ್ಥಿಗಳು ಪ್ರತಿ ವರ್ಷದ ಜಿಲ್ಲಾಡಳಿತದಿಂದ ನಡೆಯುವ ಪಥ ಸಂಚಲನದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದೆ. ಈ ಬಾರಿ ಕನ್ನಡ ರಾಜ್ಯೋತ್ಸವದ ಪಥ ಸಂಚಲನದಲ್ಲಿ ಯಶಸ್ವಿಯಾಗಿ ಭಾಗವಹಿಸಿ, ದ್ವಿತೀಯ ಬಹುಮಾನ ಪಡೆದುಕೊಂಡಿರುವುದು ಹೆಮ್ಮೆ ಎನ್ನಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ನಮ್ಮ ವಿದ್ಯಾರ್ಥಿಗಳು ಮಾಡಲಿ ಎಂದು ಆಶಿಸಿದರು.
ಸೇವಾದಳದ ಕೋಶಾಧ್ಯಕ್ಷ ವಿ. ಶ್ರೀನಿವಾಸಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಸೇವಾದಳ ಪ್ರಬಲವಾಗಿ ಸಂಘಟನೆಯಾಗುತ್ತಿದೆ. ಸೇವಾದಳ ಹೆಸರು ಸೂಚಿಸುವಂತೆ ಸೇವೆಯನ್ನು ಮಾಡುವ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ಈ ಸಂಘಟನೆಯೊಂದಿಗೆ ಗುರುತಿಸಿಕೊಂಡು ಶಿಸ್ತು ರೂಡಿಸಬೇಕು. ಇದಕ್ಕಾಗಿ ಜಿಲ್ಲಾ ಸಮಿತಿಯ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸೇವಾದಳದ ತಾಲೂಕು ಅಧಿನಾಯಕ ಎಸ್. ನಾಗಣ್ಣ ಅವರು ರಾಷ್ಟ್ರ ಪ್ರೇಮ ಮೂಡಿಸುವ ಗೀತೆಯನ್ನು ಬಹಳ ಅರ್ಥಪೂರ್ಣವಾಗಿ ಹಾಡುವ ಮೂಲಕ ವಿದ್ಯಾರ್ಥಿಗಳು ಸಹ ಧ್ವನಿಗೂಡಿಸುವಂತೆ ಮಾಡಿದರು. ಸೇವಾದಳದ ಉಪಾಧ್ಯಕ್ಷ ಕೊಂಗರಹಳ್ಳಿ ನಾಗರಾಜು, ಕಾರ್ಯದರ್ಶಿ ವಿ.ಮಹದೇವಯ್ಯ ವಿದ್ಯಾರ್ಥಿಗಳಿಗೆ ಸೇವಾಧಳ ಕಾರ್ಯ ಕಲಾಪಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಸಂಘಟಕ ಈ. ಅರುಣ್, ಬಂಜಾರ ಶಾಲೆಯ ಶಾಖಾ ನಾಯಕ ರಾಜೇಂದ್ರ, ಸದಸ್ಯ ರವಿಕುಮಾರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.