ಸೇವಾದಳದಿಂದ ಸಾವಿತ್ರಿ ಪುಲೆ ಜಯಂತಿ ಆಚರಣೆ

ದಾವಣಗೆರೆ.ಜ.೪: 19ನೇ ಶತಮಾನದಲ್ಲಿ ಭಾರತದ ಸಮಾಜ ಸುಧಾರಕರಾಗಿ ಶಿಕ್ಷಣ ತಜ್ಞರಾಗಿ ಭಾರತದ ಪ್ರಥಮ ಮಹಿಳಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೀರ್ತಿ ಸಾವಿತ್ರಿಬಾಯಿ ಪುಲೆಗೆ ಸಂದಾಯವಾಗುತ್ತದೆ ಎಂದು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರಬಾರೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಪ್ಪೇಶಪ್ಪನವರು ಅಭಿಪ್ರಾಯಪಟ್ಟರು. ಹೊನ್ನಾಳಿಯ ಗುರುಭವನದಲ್ಲಿ ಭಾರತ ಸೇವಾದಳದಿಂದ ಹಮ್ಮಿಕೊಳ್ಳಲಾಗಿದ್ದ ಸೇವಾದಳ ಶಿಕ್ಷಕರ ತಾಲೂಕು ಮಟ್ಟದ ಕಾರ್ಯಗಾರ ಮತ್ತು ಸೇವಾದಳ ಸಪ್ತಾಹ ಹಾಗೂ ಸಾವಿತ್ರಿಬಾಯಿ ಪುಲೆ  ಜನ್ಮದಿನಾಚರಣೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು ಸೇವಾದಳವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಸ್ಥೆಯಾಗಿದ್ದು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ದೇಶಭಕ್ತಿ ಭಾವೈಕ್ಯತೆ ಶಿಸ್ತು ಸೇವಾ ಮನೋಭಾವನೆಯನ್ನು ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತಿದೆ. ಕಳೆದ ಮೂರು ವರ್ಷಗಳಿಂದ ಕೊರೋನ ರಾಷ್ಟ್ರದಲ್ಲಿ ಆವರಿಸಿದ್ದು ಕೊರೋನಾದಿಂದಾಗಿ ಸೇವಾದಳ ಚಟುವಟಿಕೆಗಳು ಕುಂಠಿತವಾಗಿವೆ ಎಂದು ತಿಳಿಸಿದರು. ಹೊನ್ನಾಳಿ ನ್ಯಾಮತಿ ತಾಲೂಕಿನ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಸೇವಾದಳ ಚಟುವಟಿಕೆಗಳು ಕಡ್ಡಾಯವಾಗಿ ನಡೆಯುವಂತೆ ಮುಖ್ಯ ಶಿಕ್ಷಕರಿಗೆ ತಿಳಿಸಿದರು.ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾದ ಕೆ ಎಸ್ ಈಶ್ವರಪ್ಪನವರು ಮಾತನಾಡಿ ಶಿಕ್ಷಕರುಗಳು ಪ್ರತಿ ವರ್ಷ ಘಟಕವನ್ನು ನೋಂದಾಯಿಸಿಕೊಳ್ಳಬೇಕು ಹಾಗೆ ಶಾಲಾ ಕಾಲೇಜುಗಳಲ್ಲಿ ಪಠ್ಯಕ್ರಮದಲ್ಲಿರುವಂತೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.ವಲಯ ಸಂಘಟಕರಾದ ಅಣ್ಣಯ್ಯ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಭಾರತ ಸೇವಾದಳವು ವಿಶೇಷವಾದ ಸೇವೆಯನ್ನು ಸಲ್ಲಿಸಿದೆ. ಸ್ಯಾನಿಟೈಸರ್ ಮಾಸ್ಕ್ ವಿತರಣೆಯ ಜೊತೆಗೆ ಸಾರ್ವಜನಿಕರಿಗೆ ಅದರ ಬಗ್ಗೆ ಅರಿವು ಮೂಡಿಸತಕ್ಕಂತ ಕಾರ್ಯವನ್ನ ಮಾಡಿದೆ. ಪರೀಕ್ಷಾ ಕೇಂದ್ರಗಳಿಗೂ ಸಹ ಮಕ್ಕಳಿಗೆ ಸ್ಯಾನಿಟೈಸರ್ ಮಾಸ್ಕ್ ವಿತರಿಸುವ ಮೂಲಕ ವಿಶೇಷ ಸೇವೆಯನ್ನು ಭಾರತ ಸೇವಾದಳವು ಮಾಡಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶಿಕ್ಷಕರಿಗೆ ಕೊರೋನ ಜಾಗೃತಿ ಶಿಬಿರವನ್ನು ನಡೆಸಿ ಮಾಸ್ಕ ಸ್ಯಾನಿಟೈಸರ್ ವಿತರಿಸುವುದಾಗಿ ತಿಳಿಸಿದರು. ಪ್ರಸ್ತುತ ಸೇವಾದಳ ಮಕ್ಕಳ ಮೇಳಗಳು ಶಿಕ್ಷಕರ ಶಿಬಿರಗಳು ನಡೆಯಬೇಕಾಗಿದ್ದು ಸೇವಾದಳ ಸಮಿತಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಸಮಾಲೋಚಿಸಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಸಿದ್ದೇಶ್ವರ ಶ್ರೀಗಳ ಕುರಿತು ಅವರ ಸೇವಾ ಮಾರ್ಗದರ್ಶನದ ಕುರಿತು ಮಾತನಾಡಿ ಅವರ ಅಗಲಿಕೆಯ ಕುರಿತು ಎರಡು ನಿಮಿಷ ಮೌನಚರಣೆಯನ್ನು ಮಾಡಲಾಯಿತು.ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ನೋಡಲ್ ಅಧಿಕಾರಿಗಳು, ಶಿಕ್ಷಕರ ಸಂಘದ ದೀಪಕ್ ಮಂಜುನಾಥ್ ಗಂಡುಗಲಿ, ಭೂದೇವಿ ಸಾಲಿಮಠ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಭಾಗದ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.