ಸೇವಂತಿಗೆ ನೆಲಸಮ ರೈತ ಕಣ್ಣೀರು

ಜಗಳೂರು.ಆ.೬- ಫಲಕ್ಕೆ ಬಂದಿದ್ದ ಸೇವಂತಿ ಹೂವಿನಗಿಡಗಳನ್ನು ಕಿಡಿಗೇಡಿಗಳು ಕಿತ್ತು ನೆಲಸಮ ಮಾಡಿ ಲಕ್ಷಾಂತರ ರೂಪಾಯಿ ನಷ್ಟಮಾಡಿರುವ ಘಟನೆ ತಾಲೂಕಿನ ಕಾನನಕಟ್ಟೆ ಹೊಸೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತ ಚಿತ್ತಪ್ಪ ತನ್ನ ಒಂದು ಎಕರೆ ಜಮೀನಿನಲ್ಲಿ ಸೇವಂತಿ ಹೂವಿನ ಗಿಡಗಳನ್ನು ಬೆಳೆದಿದ್ದ. ಶ್ರಾವಣ ಹಬ್ಬದಲ್ಲಿ ಮಾರುಕಟ್ಟೆಗೆ ಕಳಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ. ಆದರೆ ಬೆಳಗಾಗುವುದರೊಳಗೆ ಹೂವಿನ ಗಿಡಗಳನ್ನು ಕಿಡಿಗೇಡಿಗಳು ಕಿತ್ತು ನಾಶಮಾಡಿದ್ದಾರೆ.
ಶ್ರಾವಣ ಮಾಸದಿಂದ ನಿರಂತರವಾಗಿ ಹಬ್ಬಗಳು ನಡೆಯುವುದರಿಂದ ಸೇವಂತಿ ಹೂ ಕೈ ಆರ್ಥಿಕ ಲಾಭ ತಂದುಕೊಡುತ್ತದೆ ಎಂಭ ಭರವಸೆಯಿಟ್ಟಿದ್ದ ರೈತನಿಗೆ ಕಿಡಿಗೇಡಿಗಳ ಕೃತ್ಯದಿಂದ ಲಕ್ಷಾಂತರ ರೂ ನಷ್ಟವಾಗಿದೆ.
ಮೂವತ್ತ ಸಾವಿರ ರೂಗಳನ್ನು ಸಾಲ ಮಾಡಿ ಬಿತ್ತನೆ ಮಾಡಲಾಗಿತ್ತು. ಉತ್ತಮ ಮಳೆಯಾಗುತ್ತಿದೆ. ಸಾಲು ಸಾಲು ಹಬ್ಬಗಳು ಬರುತ್ತಿದ್ದರಿದ್ದರಿಂದ ಸೇವಂತಿಗೆ ಕೈ ಹಿಡಿಯುತ್ತದೆ ಎಂದು ನಂಬಿದ್ದ. ಆದರೆ ಅಸೂಯೆಗಾಗಿ ಕಿರಾತರು ಲಕ್ಷಾಂತರ ರೂಪಾಯಿ ಆದಾಯ ಬರುವ ನಿರೀಕ್ಷೆಯಿದ್ದ ಗಿಡಗಳನ್ನು ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ಸಾಲ ಹೇಗೆ ತೀರಿಸಲಿ ಎಂದು ರೈತ ಚಿತ್ತಪ್ಪ ಅಳಲು ತೋಡಿಕೊಂಡರು.
ಸ್ಥಳಕ್ಕೆ ಜಗಳೂರು ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.