ಸೇಬುಹಣ್ಣಿನ ಉಪಯೋಗಗಳು

ಸೇಬುಹಣ್ಣು ಅಥವಾ ಆಪಲ್ ಎಲ್ಲರಿಗೂ ಚಿರಪರಿಚಿತವಾದ ಹಣ್ಣು. ಇದು ಸಿಹಿರಸವುಳ್ಳದ್ದು. ಇದು ಮೂಲತ: ಯೂರೋಪ್ ದೇಶದ ಹಣ್ಣು, ಇದು ಅಲ್ಲಿಂದ ಭಾರತಕ್ಕೆ ಬಂದದ್ದು. ಸೇಬಿನ ಹಣ್ಣಿನ ಬಗ್ಗೆ ಒಂದು ಮಾತಿದೆ. ‘ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ’.
ಈ ಹಣ್ಣು, ವಾತನಾಶಕ, ಪಿತ್ತನಾಶಕ, ವೀರ್‍ಯವರ್ಧಕ, ಪುಷ್ಠಿಕಾರಕ, ರುಚಿಕಾರಕ ಗುಣಗಳಿಂದ ಕೂಡಿದ್ದು, ಹೃದಯಕ್ಕೆ ಹಿತಕರವಾದದ್ದು. ಮೂತ್ರಕೋಶವನ್ನು ಕಾಪಾಡಿ, ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ನರದೌರ್ಬಲ್ಯ, ಮೆದುಳಿನ ದುರ್ಬಲತೆ ಇರುವವರಿಗೆ ಪಾಸ್ಫರಸ್ ಅಂಶ ಹೆಚ್ಚಾಗಿ ಬೇಕಾಗುತ್ತದೆ. ಸೇಬಿನಲ್ಲಿ ಪಾಸ್ಫರಸ್ ಅಂಶ ಹೆಚ್ಚಾಗಿ ಇರುವುದರಿಂದ ಪ್ರತಿದಿನ ಒಂದು ಸೇಬನ್ನು ಸಿಪ್ಪೆಸಹಿತವಾಗಿ ತಿನ್ನುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಸೇಬನ್ನು ಹಾಗೆ ಕಚ್ಚಿತಿನ್ನುವುದರಿಂದ ಹಲ್ಲುಗಳಿಗೆ ಉತ್ತಮ ಪೋಷಣೆ ಸಿಗುತ್ತದೆ. ಹಲ್ಲುಗಳು ಹೊಳಪನ್ನು ಪಡೆದುಕೊಳ್ಳುತ್ತವೆ. ಜೊತೆಗೆ ನಿಧಾನವಾಗಿ ಕಚ್ಚಿತಿನ್ನುವುದರಿಂದ ಜೊಲ್ಲುರಸ ಹೆಚ್ಚು ಉತ್ಪತ್ತಿಯಾಗಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಇದರಲ್ಲಿ ಸೋಡಿಯಂ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಪ್ರೋಟೀನ್, ನಾರಿನಂಶ, ಖನಿಜ ಪದಾರ್ಥಗಳು, ಎ ಬಿ ಸಿ ಜೀವಸತ್ವಗಳು, ಕಬ್ಬಿಣ, ಸಸಾರಜನಕ, ಶರ್ಕರಪಿಷ್ಠ, ರಂಜಕ, ತಾಮ್ರ, ಗಂಧಕ, ಅಧಿಕವಾದ ಪಾಸ್ಫರಸ್ ಗಣನೀಯವಾಗಿವೆ.
೧. ತಲೆನೋವಿಗೆ: ಆಗ್ಗಿಂದ್ದಾಗ್ಗೆ ಬರುವ ತಲೆನೋವಿಗೆ ಕೇವಲ ಈ ಹಣ್ಣಿನ ಸೇವನೆಯಿಂದ ಉಪಯೋಗವಾಗುತ್ತದೆ. ಈ ಹಣ್ಣಿಗೆ ಉಪ್ಪು ಸವರಿ ಸಿಪ್ಪೆಸಹಿತ ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಜೊತೆಗೆ ಜೊಲ್ಲುರಸದ ಪೂರೈಕೆಯಿಂದ ಕರುಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಬರುವುದಿಲ್ಲ.
೨. ಕಫ ಕಟ್ಟುವಿಕೆ: ಆಗ್ಗಿಂದ್ದಾಗ್ಗೆ ಕಫ ಕಟ್ಟುವ ಪ್ರವೃತ್ತಿ ಇರುವವರು ೪೦ ದಿನಗಳ ಕಾಲ ಸತತವಾಗಿ ಪ್ರತಿನಿತ್ಯ ಕೇವಲ ೧ ಹಣ್ಣನ್ನು ಊಟದ ನಂತರ ಸೇವಿಸುತ್ತಾ ಬಂದರೆ ಕಫ ಕಟ್ಟುವ ಪ್ರವೃತ್ತಿ ನಿವಾರಣೆಯಾಗುತ್ತದೆ.
೩. ಅತಿಸಾರ ಭೇದಿ: ಮಕ್ಕಳಿಗೆ ಭೇದಿಯಾಗುತ್ತಿದ್ದರೆ, ಸೇಬನ್ನು ತುರಿದು ಅದನ್ನು ಹಾಲಿನೊಡನೆ ಬೆರೆಸಿ ತಿನ್ನಿಸಬಹುದು. ಹಾಲು ಕುಡಿಯುವ ಮಕ್ಕಳಾದರೆ ತುರಿದ ಸೇಬನ್ನು ಹಿಂಡಿ ರಸ ತೆಗೆದು ಅದನ್ನು ಹಾಲಿನೊಡನೆ ಮಿಶ್ರಮಾಡಿ ಕುಡಿಸಬಹುದು. ಸೇಬಿನ ಹಣ್ಣನ್ನು ಬೇಯಿಸಿ, ಶೋಧಿಸಿ ಆ ನೀರನ್ನು ಕುಡಿಸುವುದರಿಂದಲೂ ಭೇದಿಯನ್ನು ತಡೆಗಟ್ಟಬಹುದು.
೪. ಹೊಟ್ಟೆಹುಣ್ಣಿಗೆ: ಪ್ರತಿದಿನ ಸೇಬುಹಣ್ಣನ್ನು ಸೇವಿಸುತ್ತಾ ಬಂದರೆ, ಹೊಟ್ಟೆಹುಣ್ಣು ಕಡಿಮೆ ಆಗುತ್ತದೆ.
೫. ನರದೌರ್ಬಲ್ಯ: ಸೇಬುಹಣ್ಣಿನ ಹೋಳುಗಳನ್ನು ಜೇನುತುಪ್ಪದಲ್ಲಿ ಮುಳುಗಿಸಿ, ಅದಕ್ಕೆ ಪನ್ನೀರು ಗುಲಾಬಿ ಹೂವಿನ ದಳಗಳನ್ನು ಹಾಕಿ, ೧ – ೨ ದಿನ ಬಿಸಿಲಿನಲ್ಲಿಟ್ಟು ತೆಗೆದಿಡಿ. ಇದನ್ನು ಕೆಲವು ದಿನಗಳು ತೆಗೆಯುವುದು ಬೇಡ. ನಂತರ ಪ್ರತಿನಿತ್ಯ ೭ – ೮ ಹೋಳುಗಳನ್ನು ಸೇವಿಸುತ್ತಾ ಬಂದರೆ, ನರದೌರ್ಬಲ್ಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ಕಡಿಮೆ ಆಗುತ್ತವೆ, ಜೊತೆಗೆ ಶರೀರದಲ್ಲಿ ನವಚೈತನ್ಯ ಉಂಟಾಗುತ್ತದೆ.
೬. ಮಲಮೂತ್ರ ವಿಸರ್ಜನೆಗೆ: ಸೇಬನ್ನು ಆಗಾಗ ಸೇವಿಸುವ ಅಭ್ಯಾಸವಿಟ್ಟುಕೊಂಡರೆ ಮಲಮೂತ್ರ ವಿಸರ್ಜನೆ ಕಾಲಕಾಲಕ್ಕೆ ಸರಿಯಾಗಿರುತ್ತದೆ.
೭. ಸೌಂದರ್ಯವರ್ಧಕಕ್ಕೆ: ಸೇಬುಹಣ್ಣನ್ನು ತುರಿದು ಮುಖಕ್ಕೆ ಲೇಪನ ಮಾಡಿಕೊಂಡರೆ, ಮೊಡವೆ, ಗುಳ್ಳೆಗಳು ಕಡಿಮೆಯಾಗಿ, ಮುಖದ ಚರ್ಮವು ಕಾಂತಿಯುತವಾಗುತ್ತದೆ.
೮. ಕಣ್ಣಿನ ಸಮಸ್ಯೆಗೆ: ಸೇಬನ್ನು ತುರಿದು ಕಣ್ಣುಮುಚ್ಚಿ ಕಣ್ಣಿನ ಮೇಲೆ ಪೂರ್ಣವಾಗಿ ಹರಡಿತೆಳುವಾದ ಬಟ್ಟೆಯನ್ನು ಕಟ್ಟಿ ಅಥವಾ ಹಾಗೆಯೇ ಅರ್ಧ ಗಂಟೆ ನಂತರ ಸ್ವಚ್ಛಗೊಳಿಸಿ. ಈ ರೀತಿ ಕೆಲವು ದಿನಗಳ ಕಾಲ ಮಾಡಿದರೆ, ಕಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಕಣ್ಣಿನ ದೃಷ್ಟಿಯೂ ಉತ್ತಮವಾಗುತ್ತದೆ.
೯. ಸೇಬು ಟೀ: ಒಂದು ಸೇಬುಹಣ್ಣು ಮತ್ತು ಒಂದು ನಿಂಬೆಹಣ್ಣು ಇವುಗಳನ್ನು ಕತ್ತರಿಸಿ, ನೀರಿನಲ್ಲಿ ಬೇಯಿಸಿ. ೧ ಗಂಟೆಯವರೆಗೆ ಮುಚ್ಚಳ ತೆಗೆಯಬೇಡಿ. ನಂತರ ಶೋಧಿಸಿಕೊಂಡು ನೀರನ್ನು ೨೧ ದಿನಗಳ ಕಾಲ ಸೇವಿಸಿ. ಇದರಿಂದ ಹೊಸಚೈತನ್ಯ ಬಂದು, ಸೋಮಾರಿತನ, ಜಡತ್ವ ದೂರವಾಗಿ ಸಂಧಿವಾತ ಸಮಸ್ಯೆಗಳು ದೂರವಾಗುತ್ತವೆ. ಕೀಲುಗಳಿಗೆ ಪುಷ್ಠಿ ಬರುತ್ತದೆ ಮತ್ತು ಕೀಲುನೋವಿಗೂ ಉತ್ತಮ ಪರಿಹಾರ ಸಿಗುತ್ತದೆ.
೧೦. ಜ್ಞಾಪಕಶಕ್ತಿಗೆ: ಪ್ರತಿನಿತ್ಯ ಸೇಬುಹಣ್ಣನ್ನು ಸೇವಿಸುವವರಿಗೆ ಜ್ಞಾಪಕಶಕ್ತಿ ಚೆನ್ನಾಗಿರುತ್ತದೆ ಹಾಗೂ ವೃದ್ಧಿಯಾಗುತ್ತದೆ.