ಸೇಫ್ ಸಿಟಿ ಟೆಂಡರ್ ನಿಂಬಾಳ್ಕರ್ ಪಾತ್ರದ ಬಗ್ಗೆ ತನಿಖೆಗೆ ರೂಪಾ ಆಗ್ರಹ

ಬೆಂಗಳೂರು,ಡಿ.27-ನಿರ್ಭಯಾ ಸೇಫ್ ಸಿಟಿ ಯೋಜನೆಯ ಟೆಂಡರ್ ನಲ್ಲಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಗೃಹ ಇಲಾಖೆಯ ಕಾರ್ಯದರ್ಶಿ ಡಿ. ರೂಪಾ ಅವರು ಆಗ್ರಹಿಸಿದ್ದಾರೆ.
ನಿರ್ಭಯಾ ಟೆಂಡರ್ ಸಮಿತಿ ಅಧ್ಯಕ್ಷರು (ಹೇಮಂತ್ ನಿಂಬಾಳ್ಕರ್) ಸರ್ಕಾರವನ್ನು ತಪ್ಪು ದಾರಿಗೆ ಎಳೆದು, ಟೆಂಡರ್​ನಲ್ಲಿ ಭ್ರಷ್ಟಾಚಾರವೆಸಗುತ್ತಿದ್ದಾರೆ. ಐಎಂಎ ಕಂಪನಿಯ ವಿರುದ್ಧ ಸಿಬಿಐ 4500 ಕೋಟಿ ರೂಪಾಯಿ ಮೋಸದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಈ ಪ್ರಕರಣದಲ್ಲಿ ನಿಂಬಾಳ್ಕರ್ ಆರೋಪಿ ಸ್ಥಾನದಲ್ಲಿದ್ದು, ಐಎಂಎ ಕಂಪನಿಯ ಮೋಸದಲ್ಲಿ ಅವರೂ ಪಾಲುದಾರರಾಗಿದ್ದಾರೆ ಎಂದು ರೂಪಾ ಆರೋಪ ಮಾಡಿದ್ದಾರೆ.
ನಿರ್ಭಯಾ ಸೇಫ್ ಸಿಟಿ ಯೋಜನೆಯ ಟೆಂಡರ್ ಈಗಾಗಲೇ ಎರಡು ಬಾರಿ ರದ್ದಾಗಿದ್ದು, ಸರ್ಕಾರಕ್ಕೆ ಹೇಮಂತ್ ನಿಂಬಾಳ್ಕರ್ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಅವರ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ರೂಪಾ ಆಗ್ರಹಿಸಿದ್ದಾರೆ.
ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಪತ್ರಿಕಾಗೋಷ್ಠಿ ನಡೆಸಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಡಿ. ರೂಪಾ ಮತ್ತೊಂದು ಸುತ್ತಿನ ಆರೋಪ ಮಾಡಿದ್ದಾರೆ.