ಸೇಫ್ ಸಿಟಿ ಅಕ್ರಮ ನೋಟೀಸ್‌ಗೆ ಐದು ಪುಟಗಳ ಉತ್ತರ ನೀಡಿದ ರೂಪಾ

ಬೆಂಗಳೂರು, ಡಿಸೆಂಬರ್ ೨೮: ನಿರ್ಭಯ ಸೇಫ್ ಸಿಟಿ ಯೋಜನೆ ಟೆಂಡರ್ ಅಕ್ರಮಕ್ಕೆ ಸಂಬಂಧಪಟ್ಟಂತೆ ನೋಟಿಸ್ ಗೆ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಮುದ್ಗಿಲ್ ಅವರು ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಐದು ಪುಟಗಳ ಉತ್ತರ ನೀಡಿದ್ದಾರೆ.
ಸೇಫ್ ಸಿಟಿ ಯೋಜನೆ ಟೆಂಡರ್ ಅಕ್ರಮಕ್ಕೆ ಸಂಬಂಧಪಟ್ಟಂತೆ ಅಪರ ಮುಖ್ಯ ಕಾರ್ಯದರ್ಶಿ ಅವರು ನೀಡಿದ್ದ ನೋಟಿಸ್ ಗೆ
ಐದು ಪುಟಗಳ ಉತ್ತರ ನೀಡಿರುವ ರೂಪಾ ಅವರು ಎಲ್ಲಾ ವಿವರಗಳನ್ನು ತಿಳಿಸಿದ್ದಾರೆ.
ಅಪರ ಮುಖ್ಯ ಕಾರ್ಯದರ್ಶಿಗಳು ಕೇಳಿದ್ದ ಏಳು ಪ್ರಶ್ನೆಗಳಿಗೆ ಉತ್ತರಿಸಿರುವ ರೂಪಾ ಅವರು, ಟೆಂಡರ್ ರದ್ದು ಗೊಳಿಸಿ ಅಕ್ರಮ ಎಸಗಿದ ಬಗ್ಗೆ ಬಿಇಎಲ್ ಸಂಸ್ಥೆ ಪ್ರಧಾನಿ ಕಚೇರಿಗೆ ನೀಡಿದ್ದ ದೂರು ಹಾಗೂ ಅಖಿಲ ಭಾರತ ಭ್ರಷ್ಟಾಚಾರ ವಿರೋಧಿ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಗೃಹ ಇಲಾಖೆಗೆ ನೀಡಿದ್ದ ದೂರನ್ನು ಉಲ್ಲೇಖಿಸಿ ಉತ್ತರಿಸಿದ್ದಾರೆ.
ಇ ಅಂಡ್ ವೈ ಕಂಪನಿಗೆ ಪ್ರಶ್ನಿಸಲು ನಿಮ್ಮ ಬಳಿ ಇದ್ದ ಮಾಹಿತಿ ಏನು ಎಂದು ಕೇಳಿದ್ದ ಪ್ರಶ್ನೆಗೆ, ಸಾರ್ವಜನಿಕವಾಗಿ ಕೇಳಿ ಬಂದಿದ್ದ ದೂರುಗಳೇ ಆಧಾರ ಎಂದಿದ್ದಾರೆ. ಅಲ್ಲದೇ ಪ್ರಧಾನಿ ಕಚೇರಿಗೆ ಸಲ್ಲಿಸಿರುವ ದೂರಿನ ಪ್ರತಿಯನ್ನು ಉಲ್ಲೇಖಿಸಿ ಸಮುಜಾಯಿಷಿ ನೀಡಿದ್ದಾರೆ.
ಉಳಿದಂತೆ ಕರ್ನಾಟಕ ಪಾರದರ್ಶಕ ನಿಯಮ ಹಾಗೂ ಟೆಂಡರ್ ಬಿಡ್ ದಾರರು ಪಾಲ್ಗೊಳ್ಳುವ ಬಗ್ಗೆ ಆರ್ಥಿಕ ಇಲಾಖೆ ನಿಗಧಿ ಪಡಿಸಿರುವ ಷರತ್ತುಗಳನ್ನು ಸಡಿಸಿಲಿ ಸೇಫ್ ಸಿಟಿ ಮೂರನೇ ಟೆಂಡರ್ ಕರೆಯಲಾಗಿದೆ. ಕರ್ನಾಟಕ ಪಾರದರ್ಶಕ ನಿಯಮಗಳನ್ನು ಉಲ್ಲಂಘಿಸಿ ಟೆಂಡರ್ ಕರೆದಿರುವ ಬಗ್ಗೆ ಎಂಟು ಅಂಶಗಳನ್ನು ಉಲ್ಲೇಖಿಸಿ ರೂಪಾ ಅವರು ಉತ್ತರ ನೀಡಿದ್ದಾರೆ. ನವರತ್ನ ಪಟ್ಟಿಗೆ ಸೇರಿರುವ ಬಿಇಎಲ್ ಕಂಪನಿ ಪಾಲ್ಗೊಂಡಿದ್ದ ಎರಡನೇ ಟೆಂಡರ್ ರದ್ದು ಪಡಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಳಿಕ ಕರೆದಿರುವ ಮೂರನೇ ಟೆಂಡರ್ ನಲ್ಲಿ ಆಗಿರುವ ಮಹಾ ಲೋಪಗಳು, ಕರ್ನಾಟಕ ಪಾರದರ್ಶಕ ನಿಯಮದ ಉಲ್ಲಂಘನೆ ಕುರಿತು ಅಂಶಗಳನ್ನು ಉಲ್ಲೇಖಿಸಿ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಐದು ಪುಟಗಳ ಉತ್ತರ ರವಾನಿಸಿದ್ದಾರೆ ಎಂದು ಗೊತ್ತಾಗಿದೆ. ಅಪರ ಮುಖ್ಯ ಕಾರ್ಯದರ್ಶಿ ಅವರ ನೋಟಿಸ್ ಗೆ ಉತ್ತರ ನೀಡಿರುವ ಸಂಗತಿಯನ್ನು ರೂಪಾ ಅವರು ಸ್ಪಷ್ಟಪಡಿಸಿದರು.
ಐಪಿಎಸ್ ಜಟಾಪಟಿ:
ನಿರ್ಭಯಾ ನಿಧಿ ಬಳಸಿ ರೂಪಿಸಿರುವ ಸೇಫ್ ಸಿಟಿ ಟೆಂಡರ್ ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಮೂಲದ ಐ ಅಂಡ್ ವೈ ಕಂಪನಿಗೆ ಕರೆ ಮಾಡಿ ಮಾಹಿತಿ ಕೇಳಿದ್ದರು. ಈ ವಿಷಯ ಟೆಂಡರ್ ಪರಿಶೀಲನಾ ಮತ್ತು ಭದ್ರತಾ ಸಮಿತಿ ಅಧ್ಯಕ್ಷರಾಗಿರುವ ಹೇಮಂತ್ ನಿಂಬಾಳ್ಕರ್ ಅವರಿಗೆ ಗೊತ್ತಾಗಿತ್ತು. ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಆಕ್ಷೇಪಿಸಿ ಹೇಮಂತ್ ನಿಂಬಾಳ್ಕರ್ ಅಪರ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ನಿಂಬಾಳ್ಕರ್ ಪತ್ರ ಬಹಿರಂಗವಾಗುತ್ತಿದ್ದಂತೆ, ನಿಂಬಾಳ್ಕರ್ ಅವರೇ ಟೆಂಡರ್ ನಲ್ಲಿ ಅಕ್ರಮ ಎಸಗಿದ್ದಾರೆ. ಐಎಂಎ ಪ್ರಕರಣದಲ್ಲಿ ಆರೋಪಿಯಾಗಿರುವ ಅವರನ್ನು ಟೆಂಡರ್ ಪರಿಶೀಲನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಹೊರಗಿಟ್ಟು ಅಕ್ರಮ ಬಗ್ಗೆ ತನಿಖೆ ನಡೆಸಬೇಕು ಎಂದು ಹಿರಿಯ ಐಪಿಎಸ್ ಅಧಿಕಾರಿ ರೂಪಾ ಅವರು ಹೇಳಿಕೆ ನೀಡಿದ್ದರು. ಇದು ಇಬ್ಬರ ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾಗಿತ್ತು.
ರೂಪಾ ಅವರ ಹೇಳಿಕೆ ಆಧರಿಸಿ ಮಾಧ್ಯಮಗಳು ಮಾಡಿರುವ ಸುದ್ದಿ ನಿರಾಧಾರ. ಸುಳ್ಳು ಆಪಾದನೆ ಮಾಡಲಾಗಿದೆ. ಈ ಬಗ್ಗೆ ನಾನು ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅದು ವಿಚಾರಣೆ ಹಂತದಲ್ಲಿದೆ ಎಂದು ನಿಂಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ಸುದ್ದಿಗೋಷ್ಠಿ ಮುಗಿದ ಕೆಲವೇ ಕ್ಷಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದ ರೂಪಾ ಅವರು, ಮೂರನೇ ಟೆಂಡರ್ ನಲ್ಲಿ ಪಾರದರ್ಶಕ ನಿಯಮ ಗಾಳಿಗೆ ತೂರಲಾಗಿದೆ ಎಂದು ವಿವರಿಸಿದ್ದರು. ನಿಂಬಾಳ್ಕರ್ ಅವರ ಪತ್ರದ ಹಿನ್ನೆಲೆಯಲ್ಲಿ ರೂಪಾ ಅವರಿಗೆ ದಾಖಲೆ ಸಮೇತ ಉತ್ತರ ನೀಡುವಂತೆ ಕೋರಿ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದರು. ಅದಕ್ಕೆ ರೂಪಾ ಅವರು ಸಮರ್ಥ ಉತ್ತರ ನೀಡಿದ್ದಾರೆ.