ಸೇನೆ ಜಮಾವಣೆ ರಷ್ಯಾಕ್ಕೆ ಅಮೆರಿಕ ತಾಕೀತು

ವಾಷಿಂಗ್ಟನ್, ಡಿ.೮- ನೆರೆ ರಾಷ್ಟ್ರ ಉಕ್ರೇನ್ ಬಳಿ ಸೇನಾ ಜಮಾವಣೆ ನಡೆಸುವ ಮೂಲಕ ಆತಂಕ ಸೃಷ್ಟಿಸಿರುವ ರಷ್ಯಾ ವಿರುದ್ಧ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಉಕ್ರೇನ್ ವಶಪಡಿಸಿಕೊಳ್ಳಲು ರಷ್ಯಾ ಎಲ್ಲಾ ರೀತಿಯ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆಗಿನ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಈ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇನ್ನು ಸಂಭಾಷಣೆಯ ಕುರಿತು ಪ್ರತಿಕ್ರಿಯೆ ನೀಡಿರುವ ಶ್ವೇತಭವನ, ಉಕ್ರೇನ್ ಗಡಿಯಲ್ಲಿ ರಷ್ಯಾ ಅಪಾರ ಪ್ರಮಾಣದ ಸೇನೆ ಜಮಾಯಿಸುತ್ತಿರುವ ಬಗ್ಗೆ ನಾವು ಜೋ ಬೈಡೆನ್ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರಷ್ಯಾ ಉದ್ಧಟತನ ಮೆರೆದರೆ ಹಿಂದೆ ಕಂಡರಿಯದ ರೀತಿಯಲ್ಲಿ ರಷ್ಯಾ ಮೇಲೆ ಆರ್ಥಿಕ ಪ್ರತಿಬಂಧ ಹೇರಲಾಗುವುದು ಎಂದು ತಿಳಿಸಿದೆ. ಆದರೆ ಅತ್ತ ಪ್ರತಿಕ್ರಿಯೆ ನೀಡಿರುವ ಪುತಿನ್, ಉಕ್ರೇನ್ ಮೇಲೆ ದಾಳಿ ಮಾಡುವ ಯಾವುದೇ ಇರಾದೆ ತನಗಿಲ್ಲ. ಆದರೆ ಉಕ್ರೇನ್ ದೇಶವು ರಷ್ಯಾದ ಗಡಿ ಪ್ರದೇಶದಲ್ಲಿ ಆಕ್ರಮಣಕಾರಿ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಈ ವರ್ಚುವಲ್ ಸಭೆ ನಡೆದಿದೆ ಎನ್ನಲಾಗಿದೆ. ಇನ್ನು ಸಭೆ ಬಳಿಕ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ಭದ್ರತಾ ಸಲಹೆಗಾರ ಜ್ಯಾಕ್ ಸುಲಿವಾನ್, ಅಗತ್ಯ ಕಂಡುಬಂದರೆ ಮುಂದಿನ ವಾರದಿಂದ ನಾವು ನಮ್ಮ ತಯಾರಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲಿದ್ದೇವೆ. ೨೦೧೪ರಲ್ಲಿ ನಾವು ಯಾವುದನ್ನು ಮಾಡಲು ಸಾಧ್ಯವಾಗಿಲ್ಲವೋ ಅದನ್ನು ಇದೀಗ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ೨೦೧೪ರಲ್ಲಿ ಕ್ರಿಮಿಯಾ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಿತ್ತು. ಆದರೆ ಈ ವೇಳೆ ಅಮೆರಿಕಾ ಪ್ರತಿಬಂಧ ಹೊರತುಪಡಿಸಿ ರಷ್ಯಾ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಮೂಲಗಳ ಪ್ರಕಾರ ಒಂದು ಉಕ್ರೇನ್ ಗಡಿಯಲ್ಲಿ ರಷ್ಯಾ ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ಯೋಧರನ್ನು ನಿಯೋಜಿಸಿದ್ದು, ಅಲ್ಲದೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೂಡ ಅಲ್ಲಿ ನಿಲ್ಲಿಸಿದೆ ಎನ್ನಲಾಗಿದೆ.