ಸೇನೆಯ ವಿಶೇಷ ಅಧಿಕಾರ ರದ್ಧತಿಗೆ ಸಿಎಂ ಆಗ್ರಹ

ಕೊಹಿಮಾ, ಡಿ. ೭- ಉಗ್ರರೆಂದು ಭಾವಿಸಿ ಸೇನಾ ಪಡೆಗಳು ೧೪ ಮಂದಿ ಗಣಿ ಕಾರ್ಮಿಕರನ್ನು ಹತ್ಯೆ ಮಾಡಿರುವ ಪ್ರಕರಣ ಕುರಿತಂತೆ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ರದ್ದುಪಡಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿವೆ. ಇದಕ್ಕೆ ನಾಗಾಲ್ಯಾಂಡ್‌ನ ಮುಖ್ಯಮಂತ್ರಿ ನಿಫಿಯು ರಿಯೋ ಕೂಡ ದ್ವನಿಗೂಡಿಸಿದ್ದಾರೆ.
ರಾಜ್ಯದಲ್ಲಿ ಸೇನಾಪಡೆಗಳ ವಿಶೇಷ ಅಧಿಕಾರಿ ಕಾಯ್ದೆ ೧೯೫೮ರಿಂದ ಜಾರಿಯಲ್ಲಿದೆ. ರಾಜ್ಯಕ್ಕೂ ವಿಶೇಷ ಸ್ಥಾನಮಾನವಿದೆ. ಹೀಗಾಗಿ ವಿಶೇಷಾಧಿಕಾರವನ್ನು ರದ್ದುಗೊಳಿಸುವ ವಿಷಯವಾಗಿ ಚರ್ಚೆಗಳು ನಡೆಯಬೇಕೆಂದು ಹೇಳಿದರು.
ನಾಗಾಲ್ಯಾಂಡ್‌ಗೆ ಸಂವಿಧಾನ ೩೭೧ (ಎ) ವಿಶೇಷ ಸ್ಥಾನಮಾನ ನೀಡಿದ್ದು, ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಅನುಮೋದನೆ ದೊರೆಯುವವರೆಗೆ ಸಂಸತ್ತಿನ ಯಾವುದೇ ಕಾಯ್ದೆಗಳು ರಾಜ್ಯಕ್ಕೆ ಅನ್ವಯವಾಗುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಾಗಾಲ್ಯಾಂಡ್ ಹಾಗೂ ನಾಗಾ ಮಂದಿ ವಿಶೇಷ ಅಧಿಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಅದನ್ನು ರದ್ದುಗೊಳಿಸಬೇಕು. ಸೇನೆಯ ಗುಂಡೇಟಿಗೆ ಬಲಿಯಾಗಿರುವ ೧೪ ಮಂದಿ ಗಣಿ ಕಾರ್ಮಿಕರ ಮೈದಾನವನ್ನು ಎಂದಿಗೂ ಮರೆಯುವುದಿಲ್ಲ. ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಇದ್ದೇವೆಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದೇ ವೇಳೆ ನಾಗಾಲ್ಯಾಂಡ್‌ನ ಮಾನ್ ಜಿಲ್ಲೆಯಲ್ಲಿ ನಿಯೋಜಿಸಲಾಗಿರುವ ಅಸ್ಸಾಂ ರೈಫಲ್ಸ್‌ನ್ನು ತಕ್ಷಣ ವಾಪಸ್ ಪಡೆಯಬೇಕು ಮತ್ತು ಸೇನೆಗೆ ನೀಡಿರುವ ವಿಶೇಷ ಅಧಿಕಾರವನ್ನು ರದ್ದುಪಡಿಸಬೇಕು ಎಂದು ನಾಗಾ ಆದಿವಾಸಿ ಸಂಘಟನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಅಮಾಯಕ ಗಣಿ ಕಾರ್ಮಿಕರ ಹತ್ಯೆಗೆ ಕಾರಣರಾದ ಸೇನೆ ಮತ್ತು ಭದ್ರತಾ ಪಡೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮತ್ತು ಸೇನೆಗೆ ನೀಡಿರುವ ವಿಶೇಷ ಅಧಿಕಾರವನ್ನು ವಾಪಸ್ ಪಡೆಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಸಂಸ್ಥೆಯಿಂದ ಸ್ವತಂತ್ರ ತನಿಖೆ ನಡೆಸಬೇಕು. ನಾಗಾ ನಾಗರಿಕ ಸಮಾಜದವರು ಒಳಗೊಂಡಂತೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.