ಸೇನೆಯಿಂದ ನಿವೃತ್ತಿ : ಚಿನ್ನದ ನಾಡಿನ ವೀರ ಸೇನಾನಿಗೆ ಸನ್ಮಾನ

ಲಿಂಗಸುಗೂರು.ನ.೧೬- ಭಾರತಾಂಬೆಯ ಸೇವೆ ಮಾಡಬೇಕೆನ್ನುವ ಚಿಕ್ಕಂದಿನ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ, ಸ್ವ ಇಚ್ಛೆಯಿಂದ ಭಾರತೀಯ ಸೇನೆಗೆ ಸೇರಿ ಇಪ್ಪತ್ತು ವರ್ಷ ಒಂಬತ್ತು ತಿಂಗಳು ಹನ್ನೆರಡು ದಿನಗಳ ಕಾಲ ಸತತ ದೇಶಕ್ಕೆ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿದ ವೀರ ಸೇನಾನಿ ಸೈಯದ್ ನಜೀರ್‌ಪಾಷಾ ಅವರನ್ನು ಪಟ್ಟಣದಲ್ಲಿ ಗೆಳೆಯರ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕಿನ ಹಟ್ಟಿ ಚಿನ್ನದ ಗಣಿಯ ನಿವಾಸಿಯಾಗಿರುವ ವೀರ ಸೈನಿಕ ನಜೀರ್‌ಪಾಷಾ ಅವರು ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ, ಜಮ್ಮು ಕಾಶ್ಮೀರ, ಬಾಂಗ್ಲಾದೇಶದ ಗಡಿ, ಪಶ್ಚಿಮ ಬಂಗಾಲ ನಕ್ಸಲೇಟ್ ಪ್ರದೇಶ, ಛತ್ತೀಸ ಗಡ, ರಾಜಸ್ಥಾನ ಮತ್ತು ಪಾಕಿಸ್ಥಾನ ಬಾರ್ಡರ್‌ಗಳಲ್ಲಿ ಭಾರತಾಂಬೆಯ ಸುರಕ್ಷತೆಗಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಸರ್ವಿಸ್‌ನಲ್ಲಿ ಹಲವು ಯುದ್ಧ ಸಂದರ್ಭಗಳನ್ನು ಕಂಡಿದ್ದೇನೆ. ತಾಯ್ನಾಡಿನ ಬಗ್ಗೆ ಗೌರವ ಇರುವ ಪ್ರತಿಯೊಬ್ಬರೂ ದೇಶ ಸೇವೆಗೆ ಮುಂದಾಗಬೇಕು. ಚಿತ್ರನಟರು, ಕ್ರೀಡಾಪಟುಗಳ ಜೊತೆಗೆ ಇಂದಿನ ಯುವ ಪೀಳಿಗೆ ದೇಶಸೇವೆಗೈದ ವೀರ ಸೇನಾನಿಗಳನ್ನೂ ಆದರ್ಶವಾಗಿಟ್ಟುಕೊಂಡು ದೇಶಾಭಿಮಾನ ಮೂಡಿಸಿಕೊಳ್ಳಬೇಕು. ನನ್ನ ಸೇವೆಯನ್ನು ಗುರುತಿಸಿ ಅಭಿನಂದಿಸಿದ ಗೆಳೆಯರ ಬಳಗಕ್ಕೆ ಕೃತಜ್ಞತೆಗಳು ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ಜಿಲಾನಿಪಾಷಾ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ, ಅಮ್ಜದ್, ಪಾಷಾ ಭೈ, ರಾಘವೇಂದ್ರ, ವೆಂಕಟೇಶ ಸೇರಿ ಸರಿಗಮ ಕರಾವೊಕೆ ತಂಡದ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.