ಸೇನೆಗೆ ನೀಡುವ ಮದ್ಯ ಅಕ್ರಮ ಮಾರಾಟ ಆರೋಪಿ ಸೆರೆ


ಬೆಂಗಳೂರು, ಡಿ.೩೧-ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಸೇನಾ ಅಧಿಕಾರಿಗಳಿಗೆ ನೀಡುವ ಮದ್ಯವನ್ನು ಪಡೆದು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್ ಮಣಿ (೬೧) ಬಂಧಿತ ಆರೋಪಿಯಾಗಿದ್ದಾನೆ. ಈತ , ಮೇಕ್ರಿ ಸರ್ಕಲ್‌ನ ಏರ್ ರ್ಫೋಸ್ ಕ್ಯಾಂಟೀನ್‌ನಿಂದ ಸೇನಾ ಅಧಿಕಾರಿಗಳಿಗೆ ನೀಡುವ ಮದ್ಯ ಖರೀದಿಸಿದ್ದಾನೆ. ಬಳಿಕ ಅದನ್ನು ಸಾಗಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಸವೇಶ್ವರ ನಗರ ಹಾಗೂ ಮಾಗಡಿ ರಸ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ ವಿವಿಧ ಬ್ರಾಂಡ್ ಗಳ ೧೧೪ ಬಾಟಲ್‌ಗಳ ೮೫ ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಆಪ್ ಮೂಲಕ ಸಾಲ ನೀಡಿ ಕಿರುಕುಳ
ಇಬ್ಬರು ಚೀನಿಯರಿಗೆ ತೀವ್ರ ಶೋಧ

ಬೆಂಗಳೂರು,ಡಿ.೩೦- ಆಪ್ ಮೂಲಕ ಸಾಲ ನೀಡಿ ಕಿರುಕುಳ ನೀಡುತ್ತಿದ್ದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಇಬ್ಬರು ಚೀನಾ ಪ್ರಜೆಗಳಿಗೆ ಜಾಗೃತ ದಳ ಹುಡುಕಾಟ ಆರಂಭಿಸಿದೆ. ಈ ಹಗರಣದಿಂದ ಹಲವು ಅಕ್ರಮಗಳು ನಡೆದಿವೆ.
ಆಪ್‌ಗಳು ಚೀನಾ ಮೂಲದವಾಗಿದ್ದು, ಸಾಲ ಕೊಡಿಸುವ ನೆಪದಲ್ಲಿ ಚೀನೀಯರೇ ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ, ಈ ಮೂಲಕ ಭಾರತದಿಂದ ಅಂಕಿ-ಅಂಶಗಳನ್ನು ಕದಿಯುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಶೋಧ ಮತ್ತು ವಿಶ್ಲೇಷಣಾ ವಿಭಾಗ ಹಾಗೂ ಜಾಗೃತ ದಳ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದು ಮೂಲದಿಂದಲೇ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ.
ಜಾಗೃತ ದಳ ಬೆಂಗಳೂರು, ತೆಲಂಗಾಣ, ಪುಣೆ, ಗುರುಗ್ರಾಮ್ ಮತ್ತು ಎನ್‌ಸಿಆರ್‌ಗಳಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮತ್ತು ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ತನಿಖೆ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ. ಕರ್ನಾಟಕದಲ್ಲಿ ಸಾಲದ ಆಪ್‌ಗಳ ವಂಚನೆ ಕೇಸನ್ನು ಅಪರಾಧ ತನಿಖೆ ಇಲಾಖೆ ತನಿಖೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಬೊರಯನ್ಸ್ಕಿ ಟೆಕ್ನಾಲಜಿಸ್‌ನ ಇಬ್ಬರನ್ನು ಬಂಧಿಸಲಾಗಿದೆ. ಈ ದಾಳಿಗೆ ಒಳಪಟ್ಟಿರುವ ಕಂಪನಿಗಳನ್ನು ಚೀನೀಯರು ನಿಯಂತ್ರಿಸುತ್ತಿದ್ದಾರೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಎಂ. ಡಿ. ಶರತ್ ತಿಳಿಸಿದ್ದಾರೆ.
ಸಿಐಡಿ, ಮ್ಯಾಡ್ ಎಲಿಫೆಂಟ್ ಟೆಕ್ನಾಲಜಿಸ್ ಪ್ರೈ ಲಿ, ಬೊರಯನ್ಸ್ಕಿ ಟೆಕ್ನಾಲಜಿಸ್ ಪ್ರೈ ಲಿಮಿಟೆಡ್, ಪ್ರೊಫಿಟೈಸ್ ಪ್ರೈ ಲಿಮಿಟೆಡ್, ವಿಝ್ ಪ್ರೊ ಸೊಲ್ಯೂಷನ್ಸ್ ಪ್ರೈ ಲಿಮಿಟೆಡ್ ಮೇಲೆ ದಾಳಿ ನಡೆಸಿದೆ. ತೆಗೆದುಕೊಂಡ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವ ಮೂಲಕ ತಮಗೆ ಕಂಪೆನಿಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರುಗಳು ಬಂದ ಆಧಾರದ ಮೇಲೆ ಈ ದಾಳಿ ಮಾಡಿದೆ.
ಈ ವೇಳೆ ಅಪಾರ ಪ್ರಮಾಣದ ನಕಲಿ ಸಿಮ್ ಕಾರ್ಡುಗಳು, ನಕಲಿ ಬ್ಯಾಂಕ್ ಖಾತೆಗಳು, ಲ್ಯಾಪ್ ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಶರತ್ ತಿಳಿಸಿದ್ದಾರೆ


ಬಿರಿಯಾನಿ ಹೋಟೆಲ್‌ನಲ್ಲಿ ಹೊಡೆದಾಟ ೬ ಮಂದಿ ಸೆರೆ
ಬೆಂಗಳೂರು,ಡಿ.೩೧-ಕಂಠಪೂರ್ತಿ ಮದ್ಯಪಾನ ಮಾಡಿದ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ನಾಲ್ವರಿಗೆ ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದ ಮಾಳಗಾಳದಲ್ಲಿ ನಡೆದಿದೆ.ಮಾಳಗಾಳದ ದೊನ್ನೆ ಬಿರಿಯಾನಿ ಹೋಟೆಲ್‌ಗೆ ನಿನ್ನೆ ರಾತ್ರಿ ಎರಡು ಗುಂಪಿನ ಸದಸ್ಯರು ಊಟಕ್ಕೆ ಬಂದಿದ್ದಾಗ ಊಟ ಸರಬರಾಜು ಮಾಡುವ ಯುವಕನ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ.
ಕೊನೆಗೆ ಮಾತು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಇದೇ ವೇಳೆ ಎರಡು ಗುಂಪಿನ ಸದಸ್ಯರು ಅಲ್ಲಿದ್ದ ಬಾಟಲ್, ಕುರ್ಚಿ, ಟೇಬಲ್‌ಗಳಿಂದ ಹೊಡೆದಾಡಿಕೊಂಡಿದ್ದಾರೆ.ಬಳಿಕ ಹೋಟೆಲ್ ಹೊರಭಾಗದ ರಸ್ತೆಯ ಮೇಲೆ ಬಂದು ಬಟ್ಟೆ ಬಿಚ್ಚಿ ಹೊಡೆದಾಡಿದ್ದಾರೆ.ಅನ್ನಪೂರ್ಣೇಶ್ವರಿ ನಗರ ಪೊಲೀಸರು ೬ ಮಂದಿ ಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Spread the love