ಸೇನಾ ಹೆಲಿಕಾಪ್ಟರ್ ಪತನ ಪೈಲಟ್ ಸಹ ಪೈಲಟ್ ಸಾವು

ಗುವಾಹಟಿ(ಅರುಣಾಚಲ ಪ್ರದೇಶ),ಮಾ.16- ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪಶ್ಚಿಮ ಕಮೆಂಗ್ ಜಿಲ್ಲೆಯ ಮಂಡಲ ಬಳಿ ಇಂದು ಬೆಳಗ್ಗೆ ಪತನಗೊಂಡಿದ್ದು, ಹೆಲಿಕಾಪ್ಟರ್‌ನ ಪೈಲಟ್ ಹಾಗೂ ಸಹ ಪೈಲಟ್ ಸಾವನ್ನಪ್ಪಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಹಾಗೂ ಮೇಜರ್ ಜಯಂತ್ ಎ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆ 9:15ಕ್ಕೆ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕ ಕಳೆದುಕೊಂಡಿತು ಎಂದು ಸೇನೆ ತಿಳಿಸಿದೆ.
ಭಾರತೀಯ ಸೇನೆಯ ಐದು ಶೋಧ ತಂಡಗಳಾದ ಸಶಸ್ತ್ರ ಸೀಮಾ ಬಾಲ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ಶೋಧ ಕಾರ್ಯ ನಡೆಸಿದ್ದು ಮಂಡಲದ ಪೂರ್ವ ಗ್ರಾಮದ ಬಂಗ್ಲಾಜಾಪ್ ಬಳಿ ವಿಮಾನದ ಅವಶೇಷಗಳು ಪತ್ತೆಯಾಗಿವೆ.
ದುರ್ಘಟನೆ ಬಗ್ಗೆ ಸೇನೆ ವಿಚಾರಣೆ ನಡೆಸುತ್ತಿದ್ದು ಅಪಘಾತದ ಕಾರಣವನ್ನು ಪತ್ತೆ ಮಾಡಲು ಆದೇಶಿಸಲಾಗಿದೆ.
ಜಿಲ್ಲೆಯ ಸಂಗೆ ಗ್ರಾಮದಿಂದ ಬೆಳಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ಟೇಕಾಫ್ ಆಗಿದ್ದು, ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಮಿಸ್ಸಮರಿ ಕಡೆಗೆ ತೆರಳುತ್ತಿತ್ತು.
ಬೊಮ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಬೆಳಿಗ್ಗೆ 09:15 ಕ್ಕೆ ಎಟಿಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ.
ಬೊಮ್ಡಿಲಾ ಪಶ್ಚಿಮದ ಮಂಡಲ ಬಳಿ ಅಪಘಾತ ಸಂಭವಿಸಿದ್ದು, ಶೋಧ ಕಾರ್ಯಗಳನ್ನು ಆರಂಭಿಸಲಾಗಿದೆ ಎಂದು ಸೇನೆ ಹೇಳಿತ್ತು.
ದಿರಾಂಗ್‌ನಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಉರಿಯುತ್ತಿರುವುದನ್ನು ಗ್ರಾಮಸ್ಥರು ಕಂಡು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವಿಶೇಷ ತನಿಖಾ ಸೆಲ್ (ಎಸ್ ಐಸಿ) ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ವಿವರಿಸಿದರು.
ದಿರಾಂಗ್‌ನಲ್ಲಿನ ಬಂಗ್ಜಲೆಪ್‌ನ ಗ್ರಾಮಸ್ಥರು ಮಧ್ಯಾಹ್ನ 12.30 ರ ಸುಮಾರಿಗೆ ಹೆಲಿಕಾಪ್ಟರ್ ಅನ್ನು ಪತ್ತೆ ಮಾಡಿದರು. ಅದು ಇನ್ನೂ ಉರಿಯುತ್ತಿದೆ ಎಂದಿದ್ದಾರೆ ಸಿಂಗ್. ಈ ಪ್ರದೇಶವು ಯಾವುದೇ ಮೊಬೈಲ್ ಸಂಪರ್ಕವನ್ನು ಹೊಂದಿಲ್ಲ ಮತ್ತು ಐದು ಮೀಟರ್‌ಗಳಷ್ಟು ಕಡಿಮೆ ಗೋಚರತೆ ಯೊಂದಿಗೆ ಹವಾಮಾನವು ಮಂಜಿನಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ