ಸೇನಾನಿಗಳ ಸಮಸ್ಯೆಗೆ ಸ್ಪಂದನೆ

ಬೆಂಗಳೂರು, ಮೇ ೩೧- ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ದಾದಿಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯ್ದ ನರ್ಸ್‌ಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ನಂತರ ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪನವರು ೬-೭ ಜಿಲ್ಲೆಗಳ ಆಯ್ದ ಕೆಲ ನರ್ಸ್‌ಗಳೊಂದಿಗೆ ಇಂದು ವೀಡಿಯೊ ಸಂವಾದ ನಡೆಸಿ ಅವರ ಕಷ್ಟ-ಸುಖಗಳನ್ನು ಕೇಳಿದ್ದೇನೆ. ಕೆಲ ಸಮಸ್ಯೆಗಳನ್ನು ಅವರು ಮುಂದಿಟ್ಟಿದ್ದಾರೆ. ಹಾಗೆಯೇ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳಿಗೆ ಪರಿಹಾರ ಒದಗಿಸುವುದಾಗಿ ಹೇಳಿದರು.
ಕೋವಿಡ್‌ನ ಈ ಸಂದರ್ಭದಲ್ಲಿ ಪ್ರಾಣದ ಹಂಗನ್ನು ತೊರೆದು ಕೆಲಸ ಮಾಡುತ್ತಿರುವ ದಾದಿಯರ ಸೇವೆಯನ್ನು ಶ್ಲಾಘಿಸಲು ಶಬ್ಧಗಳು ಸಾಲದು ಎಂದ ಅವರು, ಕೆಲವರು ಮನೆ ಮಂದಿಗೆಲ್ಲ ಕೋವಿಡ್ ಆಗಿದ್ದರೂ ಸೇವೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕೋವಿಡ್‌ಗೆ ತುತ್ತಾಗಿ ಗುಣಮುಖರಾದ ನಂತರ ಬಂದು ಸೇವೆಯಲ್ಲಿ ತೊಡಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ತಿಂಗಳ ೭ರವರೆಗೂ ಲಾಕ್‌ಡೌನ್ ಇದೆ, ಲಾಕ್‌ಡೌನ್ ಮುಂದುವರೆಸುವ ಬಗ್ಗೆ ೫ ಅಥವಾ ೬ ರಂದು ತೀರ್ಮಾನ
ಮಾಡುತ್ತೇನೆ. ಇದಕ್ಕೂ ಮೊದಲು ತಜ್ಞರೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರಕ್ಕೆ ಬರುವುದಾಗಿ ಹೇಳಿದರು.
ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದವರಿಗೆ ಬ್ಲಾಕ್ ಫಂಗಸ್ ತಗಲುತ್ತಿರುವುದನ್ನು ಸರ್ಕಾರ ಗಂಭೀರವಾಗಿ
ಪರಿಗಣಿಸಿ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಔಷಧಿ ಅಭಾವವನ್ನು ನೀಗಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.