ಸೇನಾಕ್ಯಾಂಪ್‍ನಲ್ಲಿ ನೇಣಿಗೆ ಶರಣಾದ ಮುದ್ದೇಬಿಹಾಳ ಯೋಧ

ವಿಜಯಪುರ ಡಿ 6: ದೆಹಲಿ ಬಳಿಯ ಸೇನಾ ಕ್ಯಾಂಪ್‍ನಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಯೋಧ ನೇಣಿಗೆ ಶರಣಾಗಿದ್ದಾರೆ. ದೆಹಲಿಯ ಮಿರಟ್ ಬಳಿ ಇರುವ ಎಂ.ಇ.ಜಿ ಯೂನಿಟ್-9 ರ ಸೇನಾ ಕ್ಯಾಂಪ್‍ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಜಟ್ಟಗಿ ಗ್ರಾಮದ ಸೈನಿಕ ಮಂಜುನಾಥ ಯಲ್ಲಪ್ಪ ಹೂಗಾರ (22) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ತರಬೇತಿ ಮುಗಿಸಿಕೊಂಡು ಸೇವೆಗೆ ಹಾಜರಾಗಿದ್ದ ಮಂಜುನಾಥ ಹೂಗಾರ ಇದೀಗ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಈ ವಿಷಯವನ್ನು ಸೇನಾ ಕ್ಯಾಂಪಿನ ಅಧಿಕಾರಿಗಳು ಮುದ್ದೇಬಿಹಾಳ ಪೆÇಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಮಾಹಿತಿ ತಲುಪಿಸಿದ್ದಾರೆ. ಸಾವನ್ನಪ್ಪಿರುವ ಸೈನಿಕ ಮಂಜುನಾಥರಿಗೆ ಮದುವೆ ಆಗಿರಲಿಲ್ಲ. ಮಂಜುನಾಥಗೆ ತಂದೆ ಯಲ್ಲಪ್ಪ, ತಾಯಿ ನಾಗಮ್ಮ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ. ಸೇನಾ ಕ್ಯಾಂಪನಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಸೈನಿಕ ಮಂಜುನಾಥ ಹೂಗಾರ ಅವರ ಪಾರ್ಥಿವ ಶರೀರ ಎರಡು ದಿನಗಳಲ್ಲಿ ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ದೆಹಲಿ ಸೇನಾ ಆಸ್ಪತ್ರೆಯಲ್ಲಿ ಮೃತ ದೇಹವಿದ್ದು ಮರಣೋತ್ತರ ಪರೀಕ್ಷೆ ನಡೆದ ಬಳಿಕ ವಿಮಾನದ ಮೂಲಕ ಬೆಂಗಳೂರು, ಇಲ್ಲವೇ ಬೆಳಗಾವಿ ಮೂಲಕ ಮುದ್ದೇಬಿಹಾಳಕ್ಕೆ ಆಗಮಿಸುವ ನಿರೀಕ್ಷೆ ಇದೆ ಕುಟುಂಬಸ್ಥರು ತಿಳಿಸಿದ್ದಾರೆ.