ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾಮಗಾರಿ ಚಾಲನೆ ನಾಳೆ

ಕಲಬುರಗಿ,ಜ.4-ಅಫಜಲಪುರ ತಾಲ್ಲೂಕಿನ ಘೂಳನೂರ ಹಾಗೂ ಮೋಗನ ಇಟಗಾ ಗ್ರಾಮಗಳ ನಡುವೆ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾಮಗಾರಿಗೆ ಜ.5 ರಂದು ಬೆಳಿಗ್ಗೆ 11 ಗಂಟೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಮಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದ್ದಾರೆ.
ಕಾಮಗಾರಿಗೆ 2019ರ ಡಿ.24 ರಂದು 72 ಕೋಟಿ ರೂ.ಗಳಿಗೆ ಅಣೆಕಟ್ಟು, ಪಿಕಪ್ ಬಾಂದಾರ ಪ್ರದಾನ ಕಾಮಗಾರಿಗಳ ಅಡಿಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದಕ್ಕೆ 2020ರ ಮಾ.18 ರಂದು ತಾಂತ್ರಿಕ ಮಂಜೂರಾತಿ ಸಿಕ್ಕಿದೆ. ಬಿಸಿಬಿಯು 218 ಚ.ಕಿ.ಮೀಗಳಷ್ಟು ಜಲಾಶಯ ಪ್ರದೇಶ ಹೊಂದಿದ್ದು, 372 ಮೀ.ಉದ್ದವಿದೆ. ಎತ್ತರ9.00 ಮೀಟರ್ ಇದೆ. ಬಿಸಿಬಿಯ ಡೆಕ್ ಸ್ಲ್ಯಾಬ್ ಅಗಲ 7.50 ಮೀ.ಇದೆ. ಬಿಸಿಬಿಯಲ್ಲಿ 10.427 ದಶಲಕ್ಷ ಘ.ಮೀ.ನೀರನ್ನು ಶೇಖರಿಸಲು ಉದ್ದೇಶಿಸಲಾಗಿದೆ. 1750.00 ಹೆಕ್ಟೇರ್ ಪ್ರದೇಶಕ್ಕೆ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿದೆ. ಬಿಸಿಬಿಗೆ 10.00x 5.00 ಅಳತೆಯ ಎಲೆಕ್ಟ್ರೋ ಮೆಕಾನಿಕಲ್ ಗೇಟುಗಳನ್ನು 30 ಕಿಂಡಿಗಳಿಗೆ 30 ಗೇಟುಗಳನ್ನು ನೀರಿನ ಸಂಗ್ರಹಕ್ಕಾಗಿ ಅಳವಡಿಸಲಾಗಿದೆ. ಬ್ಯಾರೇಜ್ ನಿಂದ 12.50 ಕಿ.ಮೀ ನೀರು ನಿಲ್ಲಲಿದೆ. ಈ ಬಿಸಿಬಿಯ ನಿರ್ಮಾಣದಿಂದ ಅಫಜಲಪುರ ತಾಲ್ಲೂಕಿನಲ್ಲಿ ಬರುವ ಘೂಳನೂರ, ದೇಸಾಯಿ ಕಲ್ಲೂರ, ಆನೂರ, ಬಿಲ್ವಾಡ (ಬಿ), ಬಿಲ್ವಾಡ (ಕೆ), ಬಟಗೇರಾ, ಕೆರಕನಹಳ್ಳಿ, ತೆಲ್ಲೂರ, ಗುಡ್ಡೇವಾಡಿ, ಜೇವರ್ಗಿ ತಾಲ್ಲೂಕಿನ ಮೋಗನ ಇಟಗಾ, ಹರನಾಳ, ಹುಲ್ಲೂರ, ಅಂಕಲಗಾ, ನಾರಾಯಣಪುರ ಗ್ರಾಮಗಳ ರೈತರ ಜಮೀನುಗಳಿಗೆ ಪರೋಕ್ಷವಾಗಿ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.