ಸೇತುವೆ ದುರಂತ ನ್ಯಾಯಾಂಗ ತನಿಖೆಗೆ ಖರ್ಗೆ ಆಗ್ರಹ

ನವದೆಹಲಿ,ಅ.೩೧- ಗುಜರಾತ್‌ನ ಮೊರ್ಬಿಯಲ್ಲಿ ನಡೆದ ಸೇತುವೆ ಪ್ರಕರಣದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.ಮೋರ್ಬಿಯಲ್ಲಿ ಕಿಕ್ಕಿರಿದು ತುಂಬಿದ್ದ ತೂಗು ಸೇತುವೆ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಟ್ಟ ಐದು ದಿನಗಳಲ್ಲಿ ಕುಸಿದು ಬಿದ್ದಿರುವ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.ಆದರೆ ಯಾವ ತನಿಖೆ ಎಂದು ತಿಳಿಸಿಲ್ಲ. ನ್ಯಾಯಾಂಗ ತನಿಖೆ ನಡೆಸಿದರೆ ಅಸಲಿ ಸತ್ಯ ತಿಳಿಯಲಿದೆ ಎಂದಿದ್ದಾರೆ.
೧೩೦ ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಗುಜರಾತ್‌ನ ಮೋರ್ಬಿ ಸೇತುವೆಯ ಕುಸಿತದ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸೂಕ್ತ ಪರಿಹಾರಕ್ಕೆ ಆಗ್ರಹ:
ಸೇತುವೆ ಕುಸಿತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡ ಕುಟುಂಬಗಳಿಗೆ ಸೂಕ್ತಪರಿಹಾರ ನೀಡಬೇಕು ಎಂದು ಗುಜರಾತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಮೋರ್ಬಿಯಲ್ಲಿ ನಿಧನರಾದವರಿಗೆ ಎರಡು ನಿಮಿಷಗಳ ಮೌನವನ್ನು ಅರ್ಪಿಸಿದರು.

ಮೊರ್ಬಿಯಲ್ಲಿ ಕೈ ನಾಯಕರು:
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಇತರ ನಾಯಕರು ಸಂಕಷ್ಟದಲ್ಲಿರುವ ಮಂದಿಗೆ ಸಹಾಯ ನೀಡಲು ಮೊರ್ಬಿಯನ್ನು ತಲುಪಲಿದ್ದಾರೆ ಎಂದು ಹೇಳಿದ್ದಾರೆ.ನಾವು ಇದರಲ್ಲಿ ಯಾವುದೇ ರಾಜಕೀಯ ಮಾಡಲು ಬಯಸುವುದಿಲ್ಲ, ಸದ್ಯಕ್ಕೆ ಯಾರನ್ನೂ ದೂಷಿಸಲು ನಾವು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
“ತನಿಖೆಯ ವರದಿ ಬಂದಾಗ, ಅದು ಹೇಗೆ ಸಂಭವಿಸಿದೆ ಎನ್ನುವ ಕುರಿತು ವರದಿ ಬಂದ ನಂತರ ಪ್ರತಿಕ್ರಿಯೆ ನೀಡುತ್ತೇವೆ. ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳುವುದು ಮತ್ತು ಅಗತ್ತ ಪರಿಹಾರ ಒದಗಿಸುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.