ಸೇತುವೆಯಿಂದ ಬಸ್ ಉರುಳಿ 15 ಮಂದಿ ಸಾವು

ಭೋಪಾಲ್,ಮೇ.೯-ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಸೇತುವೆಯಿಂದ ಬಸ್ ಕೆಳಗೆ ಉರುಳಿಬಿದ್ದ ಪರಿಣಾಮ ಸ್ಥಳದಲ್ಲಿ ೧೫ ಮಂದಿ ಸಾವನ್ನಪ್ಪಿದ್ದು , ೨೫ ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಗಾಯಗೊಂಡವನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳುಗಳಲ್ಲಿ ಹಲವು ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಎಂದು ಪೊಲೀಸ್ ವರಿಷ್ಠಾಧಿಕಾರಿ ಧರಂ ವೀರ್ ಸಿಂಗ್ ಹೇಳಿದ್ದಾರೆ.
೪ ಲಕ್ಷ ರೂಪಾಯಿ ಪರಿಹಾರ
ಬಸ್ ಅಪಘಾತದಲ್ಲಿ ಮೃತಪಟ್ಟ ಕುಟುಂಬದ ಹತ್ತಿತರದ ಸದಸ್ಯರಿಗೆ ಮಧ್ಯಪ್ರದೇಶ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ೪ ಲಕ್ಷ ತಕ್ಷಣದ ಆರ್ಥಿಕ ನೆರವು ಘೋಷಿಸಿದೆ.
ಅಲ್ಲದೆ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ೫೦,೦೦೦ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ೨೫,೦೦೦ ನೀಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ತಿಳಿಸಿದ್ದಾರೆ.
ಗಾಯಾಳುಗಳಿಗೆ ಚಿಕಿತ್ಸೆ:
ಬಸ್ ಅಪಘಾತದಲ್ಲಿ ಗಾಯಗೊಂಡ ಮಂದಿಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ರಾಜ್ಯ ಸರ್ಕಾರವೇ ಖರ್ಚು ವೆಚ್ಚ ಭರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಕ್ರಂದನ :
ಬಸ್ ಅಪಘಾತದಲ್ಲಿ ಮೃತಪಟ್ಟ ಕುಂಟಬದ ಸದಸ್ಯರ ಆಂಕ್ರಂದನ ಮುಗಿಲು ಮುಟ್ಟಿದೆ. ಮೃತಪಟ್ಟ ಮಂದಿಯ ಮರಣೋತ್ತರ ಪರೀಕ್ಷೆ ನಡೆಸಿ ಪಾರ್ಥೀವ ಶರೀರವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೇತುವೆ ಮೇಲೆ ಬಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ.ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.