ಸೇತುವೆಯಿಂದ ಕೆಳಗೆ ಕಾರು ಪಲ್ಟಿ ನವ ವಿವಾಹಿತ ಸಾವು

ಕಾರವಾರ,ನ.19-ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ನವ ವಿವಾಹಿತ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹಡಿನಬಾಳದಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ರಾಹುಲ್ (32) ಮೃತಪಟ್ಟವರು.  ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಕಾರಿನಲ್ಲಿ ಒಟ್ಟು ಎರಡು ಯುವ ಜೋಡಿಗಳು ತೆರಳುತ್ತಿದ್ದವು ಎನ್ನಲಾಗಿದೆ.  
ಹಡಿನಬಾಳ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ  ಕಾರು ಸೇತುವೆ ಕೆಳಗೆ ಬಿದ್ದಿದೆ. ಸಾವಿಗೀಡಾದವನ ಪತ್ನಿ ಹಾಗೂ ಇನ್ನೊಂದು ಜೋಡಿಗೆ ಗಂಭೀರ ಗಾಯವಾಗಿದೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.