ಸೇತುವೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಮಂಗಳೂರು, ಎ.೨೯- ಸ್ನೇಹಿತರ ಜೊತೆಗೆ ತಡರಾತ್ರಿ ನೇತ್ರಾವತಿ ರೈಲ್ವೇ ಸೇತುವೆಗೆ ವಿಹಾರಕ್ಕೆ ತೆರಳಿದ್ದ ಉಳ್ಳಾಲಬೈಲ್ ನಿವಾಸಿ ನಿತಿನ್ (32) ಮೃತದೇಹ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಆಡಂಕುದ್ರು ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ವೇಳೆ ಪತ್ತೆಯಾಗಿದೆ.

ನಿತಿನ್ ಸೋಮವಾರ ಮಧ್ಯಾಹ್ನ ಇಬ್ಬರು ಸ್ನೇಹಿತರ ಜೊತೆಗೆ ಸೋಮೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿದ್ದ ಎನ್ನಲಾಗಿದ್ದು ತದನಂತರ ಸಂಜೆ ಮೂವರು ಸೇರಿ ನೇತ್ರಾವತಿ ರೈಲ್ವೇ ಸೇತುವೆ ಬಳಿ ತೆರಳಿದ್ದರು. ಅಲ್ಲಿಂದ ನಿತಿನ್ ನಾಪತ್ತೆಯಾಗಿದ್ದಾರೆ. ಆ ಬಗ್ಗೆ ನಿತಿನ್ ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು ಪೊಲೀಸರು ನಿತಿನ್ ಜೊತೆಗಿದ್ದ ಇಬ್ಬರು ಸ್ನೇಹಿತರ ವಿಚಾರಣೆ ನಡೆಸಿದ್ದರು. ನಿನ್ನೆ ಸಂಜೆ ವೇಳೆ ನಿತಿನ್ ಮೃತದೇಹ ಪತ್ತೆಯಾಗಿದೆ. ಸ್ನೇಹಿತರ ಜೊತೆಗೆ ವಿಹರಿಸುತ್ತಿದ್ದ ಸಂದರ್ಭ ರೈಲು ಬಂದಿತ್ತು. ಇದರಿಂದ ಗಾಬರಿಗೊಂಡು ನಿತಿನ್ ನದಿಗೆ ಹಾರಿದ್ದನೆನ್ನಲಾಗಿದೆ. ನಿತಿನ್ ಅವಿವಾಹಿತರಾಗಿದ್ದು ಈ ಹಿಂದೆ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ಕೊರೊನಾ ಲಾಕ್ ಡೌನ್ ನಂತರ ಊರಿಗೆ ಮರಳಿದ್ದು ವೆಲ್ಡರ್ ವೃತ್ತಿ ನಡೆಸುತ್ತಿದ್ದರು.