ಸೇಡಂ‌ ಸಹಕಾರ ಸಪ್ತಾಹ ಕಾರ್ಯಕ್ರಮಮಳಿಗೆ ಸ್ಥಾಪಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಡಿ.ಸಿ.ಸೂಚನೆ

ಕಲಬುರಗಿ,ನ.12: ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಇದೇ‌ ನ.14 ರಂದು ಅಯೋಜಿಸಿರುವ 69ನೇ ಅಖಿಲ‌ ಭಾರತ ಸಹಕಾರ ಸಪ್ತಾಹ-2022 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುತ್ತಿರುವ ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದು, ಹೀಗಾಗಿ ವಿವಿಧ ಇಲಾಖೆಗಳು ಜನಪರ ಯೋಜನೆಗಳ ಜಾಗೃತಿ ಮೂಡಿಸಲು ಮಳಿಗೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.

ಶನಿವಾರ ಝೂಮ್ ಮೀಟ್ ಮೂಲಕ ಅಧಿಕಾರಿಗಳ ಸಭೆ ನಡೆಸಿದ ಅವರು, ಮಳಿಗೆಯಲ್ಲಿ‌ ಖುದ್ದು ಅಧಿಕಾರಿಗಳು ಲಭ್ಯವಿದ್ದು, ಸಾರ್ವಜನಿಕರಿಗೆ ಸರ್ಕಾರದ ಪ್ರಮುಖ ಯೋಜನೆಗಳ ಕುರಿತು ಅರಿವು‌ ನೀಡಬೇಕು. ಜೊತೆಗೆ ಯೋಜನೆಗಳ ಕಿರು ಹಿತ್ತಿಗೆ, ಕರಪತ್ರ‌ ವಿತರಿಸಬೇಕು. ಮಳಿಗೆಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದರು.

ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರವಾಸೋದ್ಯಮ, ಜಿಲ್ಲಾ ಪಂಚಾಯತ್, ಕಾರ್ಮಿಕ, ಕಂದಾಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹೀಗೆ ಪ್ರಮುಖ ಇಲಾಖೆಗಳು ಮಳಿಗೆ ತೆರೆಯಬೇಕು. ರವಿವಾರ ಸಾಯಂಕಾಲದೊಳಗೆ‌ ಮಳಿಗೆ ಸ್ಥಾಪನೆ ಕಾರ್ಯ ಮುಗಿಸುವಂತೆಲೋಕೋಪಯೋಗಿ ಇಲಾಖೆಯ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಮಲ್ಲಿಕಾರ್ಜುನ ಜೇರಟಗಿ ಅವರಿಗೆ ಡಿ.ಸಿ. ಸೂಚಿಸಿದರು.

ಸೋಮವಾರ ಕಾರ್ಯಕ್ರಮವಿರುವುದರಿಂದ ಎಲ್ಲಾ ಪೂರ್ವಸಿದ್ಧತೆ ಕಾರ್ಯ ರವಿವಾರ ಸಾಯಂಕಾಲದೊಳಗೆ ಮುಗಿಸಬೇಕು. ಸೇಡಂ ಸಹಾಯಕ ಆಯುಕ್ತರು ಸಿ.ಎಂ. ಅವರ ಮಿನಟ್ ಟು ಮಿನಟ್ ಕಾರ್ಯಕ್ರಮ ಅಂತಿಮಗೊಳಿಸಬೇಕು. ಕಾರ್ಯಕ್ರಮ ಯಶಸ್ಸಿಗೆ ಆಯಾ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿ ಚಾಚುತಪ್ಪದೆ ನಿರ್ವಹಿಸುವಂತೆ ಸೂಚಿಸಿದರು.

ಇನ್ನು ಮಾಡಿಯಾಳ ತಾಂಡಾದ ಸರ್ಕಾರಿ ಬಾಲಕೀಯರ‌ ಪ್ರೌಢ ಶಾಲೆಯಲ್ಲಿ ವಿವೇಕ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣದ ಶಂಕುಸ್ಥಾಪನೆ‌ ಕಾರ್ಯಕ್ರಮ ಸಂಪೂರ್ಣ ಉಸ್ತುವಾರಿ ಜಿಲ್ಲಾ ಪಂಚಾಯತಿ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಅವರು ನೋಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರುವ ಮತ್ತು ಕರೆದೊಯ್ಯುವ ಕೆಲಸ ಶಿಕ್ಷಣ ಇಲಾಖೆಯವರು ಮಾಡಬೇಕು. ಮಕ್ಕಳಿಗೆ ಕೆ.ಕೆ.ಆರ್.ಟಿ.ಸಿ. ಸಂಸ್ಥೆ ಸೂಕ್ತ‌ ಸಾರಿಗೆ ಬಸ್ ಗಳನ್ನು ಕಲ್ಪಿಸಬೇಕೆಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ, ಕೆ.ಕೆ.ಅರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ
ಸೇರಿದಂತೆ‌ ಜಿಲ್ಲಾ ಮಟ್ಟದ ಅನೇಕ ಅಧಿಕಾರಿಗಳು ಇದ್ದರು‌.