ಸೇಡಂ ಪುರಸಭೆ ಮುಖ್ಯಾಧಿಕಾರಿ ಶಿವಪೂಜೆಯವರಿಗೆ ಜೈಲು ಶಿಕ್ಷೆ

ಕಲಬುರಗಿ:ನ.13: ಲೋಕಾಯುಕ್ತರಿಗೆ ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಜಿಲ್ಲೆಯ ಸೇಡಂ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಹುಮ್ನಾಬಾದ್ ತಾಲ್ಲೂಕಿನ ಸಿಂಧನಕೇರಾದ ನಿವಾಸಿ ಬಸವರಾಜ್ ತಂದೆ ಮಡಿವಾಳಪ್ಪ ಶಿವಪೂಜೆ ಅವರಿಗೆ ಜಿಲ್ಲಾ ಪ್ರಧಾನ ಹಾಗು ವಿಶೇಷ ಸತ್ರ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಅವರು ಕಲಂ. 8 ಪಿ.ಸಿ ಆಕ್ಟನೇದ್ದರಲ್ಲಿ 3 ವರ್ಷ ಶಿಕ್ಷೆ ರೂ. 5,000ರೂ>ಗಳ ದಂಡ, 13(1)(ಡಿ) ಸಂಗಡ 13(2) ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ 3 ವರ್ಷ ಶಿಕ್ಷೆ ಹಾಗೂ 5,000 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸೇಡಂ ಪಟ್ಟಣದ ಕೆಇಬಿ ಕಾಲೋನಿಯ ನಿವಾಸಿ ಶ್ರೀನಿವಾಸ್ ತಂದೆ ಹನುಮಾ ನಾಯಕ್ ಅವರ ತಂದೆ ಪುರಸಭೆ ಕಚೇರಿಯ ಮನೆ ಆಶ್ರಯ ಶಾಖೆಯ ನಿರ್ವಾಹಕರಾಗಿದ್ದು, ಅವರಿಗೆ ಆಡಳಿತಾಧಿಕಾರಿಗಳು ಹಾಗೂ ಪ್ರಭಾರಿ ಸಹಾಯಕ ಆಯುಕ್ತರು ಮಾಡಿರುವ ಆದೇಶದ ಅನ್ವಯ ಕೆಸಲದಿಂದ ವಜಾಗೊಳಿಸಿಲ್ಲ. ಸದರಿ ಅರ್ಜಿಯ ಮೇಲೆ ಆಡಳಿತಾಧಿಕಾರಿಗಳ ರುಜು ಪಡೆದುಕೊಂಡು ಕೆಲಸದಲ್ಲಿ ಮುಂದುವರೆಸಲು ಆದೇಶ ಮಾಡಿಕೊಂಡು ಬರುತ್ತೇನೆ 10,000 ರೂ.ಗಳ ಹಣ ತಂದುಕೊಡಲು ಲಂಚಕ್ಕಾಗಿ ಒತ್ತಾಯಿಸಿದರು. ಈ ಕುರಿತು ಅವರು ದೂರು ಸಲ್ಲಿಸಿದ್ದರು.
ದೂರನ್ನು ಸ್ವೀಕರಿಸಿದ ಲೋಕಾಯುಕ್ತ ಪೋಲಿಸ್ ಇನ್‍ಸ್ಪೆಕ್ಟರ್ ಜೇಮ್ಸ್ ಮಿನೇಜಸ್ ಅವರು ಕಳೆದ 2013ರ ಆಗಸ್ಟ್ 3ರಂದು ಕಾರ್ಯಾಚರಣೆ ನಡೆಸಿ ಲಂಚ ಪಡೆಯುತ್ತಿದ್ದಾಗ ಕಚೇರಿಯ ಎದುರುಗಡೆ ವಶಕ್ಕೆ ತೆಗೆದುಕೊಂಡರು. ಲೋಕಾಯುಕ್ತ ಪೋಲಿಸ್ ಇನ್ಸಪೆಕ್ಟರ್ ಟಿ.ಆರ್. ರಾಘವೇಂದ್ರ ಅವರು ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದರು. ನ್ಯಾಯಾಧೀಶರು ವಿಚಾರಣೆ ನಡೆಸಿ ಶಿಕ್ಷೆ ಹಾಗೂ ದಂಡದ ತೀರ್ಪು ನೀಡಿದರು. ಪ್ರಕರಣದಲ್ಲಿ ಅಬ್ದುಲ್ ನಬಿ ಅವರು ಸಾಕ್ಷಿದಾರರಿಗೆ ಪ್ರಕರಣಕ್ಕೆ ಸಂಬಂಧಪಟ್ಟ ಕ್ರಮಬದ್ಧವಾದ ಮಾಹಿತಿ ತಿಳಿಸಿ, ಸಾಕ್ಷಾಧಾರಗಳನ್ನು ನ್ಯಾಯಾಲಯದಲ್ಲಿ ಒದಗಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದರು. ಲೋಕಾಯುಕ್ತರ ಪರವಾಗಿ ಪ್ರಕರಣದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕ ಎ.ಎಸ್. ಚಾಂದಕವಟೆ ಅವರು ವಾದ ಮಂಡಿಸಿದರು.