ಸೇಡಂದಲ್ಲಿ ಕಡ್ಡಾಯ ಮತದಾನ ಮಾಡುವ ಕುರಿತಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಚಾಲನೆ

ಕಲಬುರಗಿ,ಮೇ.8: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಸೇಡಂ ತಾಲೂಕು ಸ್ವೀಪ್ ಸಮಿತಿಯಿಂದ ಕಡ್ಡಾಯ ಮತದಾನ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಸೇಡಂ ಸಹಾಯಕ ಆಯುಕ್ತ ಕಾರ್ತಿಕ್ ಅವರು ಸೋಮವಾರ ಚಾಲನೆ ನೀಡಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಥೋಡ, ತಹಶೀಲ್ದಾರ ಶಿವರಾಜ್ ಅವರ ನೇತೃತ್ವದಲ್ಲಿ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡ ಈ ಜಾಥಾವು ನಗರದ ಚೌರಸ್ತಾ, ಕಿರಣಾ ಬಜಾರ, ಮಾರ್ಕೆಟ್ ಮೂಲಕ ರೈಲ್ವೆ ನಿಲ್ದಾಣಕ್ಕೆ ಬಂದು ಕೊನೆಗೊಂಡಿತು. ಈ ಸಂದರ್ಭದಲ್ಲಿ ಎಲ್ಲರಿಗೂ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸೇಡಂ ತಾಲೂಕು ಅಧ್ಯಕ್ಷ ಶಿವಶಂಕರಯ್ಯಾ ಸ್ವಾಮಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ಗ್ರಾಮೀಣ ಕುಡಿಯುವ ನೀರು ಇಲಾಖೆ, ನರೇಗಾ, ಕೃಷಿ ಇಲಾಖೆ, ಪಶು ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.