ಬೀದರ್: ಎ.2:ನಗರಸಭೆಯಿಂದ ಜೆಸಿಬಿ ಬಳಸಿ ಸೇಂಟ್ ಜೋಸೆಫ್ ಚರ್ಚ್ ಸುತ್ತುಗೋಡೆ ನೆಲಸಮಗೊಳಿಸಿರುವುದನ್ನು ಖಂಡಿಸಿ ಕ್ರೈಸ್ತರು ಇಲ್ಲಿಯ ನಗರಸಭೆ ಕಚೇರಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರಸಭೆ ಆಯುಕ್ತರ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಅವರನ್ನು ಅಮಾನತುಗೊಳಿಸಬೇಕು. ಚರ್ಚ್‍ಗೆ ರೂ. 50 ಲಕ್ಷ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಹರ್ಷ ಗುಪ್ತಾ ಜಿಲ್ಲಾಧಿಕಾರಿಯಾಗಿದ್ದಾಗ ರಿಂಗ್ ರಸ್ತೆ ನಿರ್ಮಾಣದಲ್ಲಿ ಚರ್ಚ್‍ನ 1.5 ಎಕರೆ ಭೂಮಿ ಹೋಗಿದ್ದು, ಈವರೆಗೂ ಪರಿಹಾರ ದೊರೆತಿಲ್ಲ. ರಿಂಗ್ ರಸ್ತೆ ಪಕ್ಕದಲ್ಲಿ ಉಳಿದ ಶೇ 10 ರಷ್ಟು ಜಮೀನಿನ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ಸುತ್ತುಗೋಡೆಯನ್ನು ನಗರಸಭೆ ಆಯುಕ್ತರು ಯಾವುದೇ ಸೂಚನೆ ನೀಡದೆ ನೆಲಸಮಗೊಳಿಸಿದ್ದಾರೆ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ ಜಾಗೀರದಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭಕ್ತರ ದೇಣಿಗೆಯಿಂದ ಕಟ್ಟಿದ್ದ ಸುತ್ತುಗೋಡೆ ತೆರವಿನಿಂದ ರೂ. 50 ಲಕ್ಷ ನಷ್ಟವಾಗಿದೆ ಎಂದು ದೂರಿದರು.
ಚರ್ಚ್ ಈವರೆಗೆ ಯಾವುದೇ ಭೂ ಕಬಳಿಕೆ ಮಾಡಿದ ಉದಾಹರಣೆ ಇಲ್ಲ. ಹಳ್ಳದಕೇರಿಯ ಸರ್ವೇ ಸಂಖ್ಯೆ 53 ರಲ್ಲಿನ ಚರ್ಚ್‍ಗೆ ಸೇರಿದ ಭೂಮಿಗೆ ನಿರ್ಮಿಸಿದ್ದ ಸುತ್ತುಗೋಡೆ ನೆಲಸಮಗೊಳಿಸಿದ ಆಯುಕ್ತರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಫಾದರ್‍ಗಳಾದ ವಿಲ್ಸನ್, ಕ್ರಿಸ್ತರಾಜು, ಪೌಲ್, ಸಿಸ್ಟರ್ ಕ್ರಿಸ್ಟಿನಾ, ಲಿವೆನಾ, ಪ್ರಮುಖರಾದ ಜೀವನ್ ಚಿದ್ರಿ, ಸಬಸ್ಟಿನ್ ಚಿದ್ರಿ, ಸ್ವಾಮಿದಾಸ್ ಚಿದ್ರಿ, ಪಿಂಟೂ ಜಾಗೀರದಾರ್, ಸುರೇಶ ಜಮಗಿ ಕಾಲೊನಿ, ಪ್ರಭು ಜಮಗಿ ಕಾಲೊನಿ, ಮೋಜಸ್ ನಿರ್ಣಾಕರ್, ಆಕಾಶ ಮೊದಲಾದವರು ಪಾಲ್ಗೊಂಡಿದ್ದರು.