ಸೇಂಟ್ ಜಾನ್ಸ್ ಶಾಲೆಯಲ್ಲಿ ಚಿಣ್ಣರ ರೈನ್ ಡೇ


ದಾವಣಗೆರೆ.ಜು.25 : ಜಿನಿ..ಜಿನಿ ಸುರಿಯುತ್ತಿರುವ ಮಳೆ, ಮಳೆಗೆ ತಕ್ಕಂತೆ ಹಾಡು, ಪುಟ್ಟ ಕೈಯಲ್ಲೊಂದು ಛತ್ರಿ, ಹಾಡಿಗೆ ಅನುಸಾರವಾಗಿ ಕುಣಿಯುತ್ತಿದ್ದ ಶಿಕ್ಷಕಿಯರು…ಸುತ್ತಲೂ ಮಳೆ ವಾತಾವರಣ, ಮಕ್ಕಳ ನೃತ್ಯವನ್ನು ದೂರದಿಂದ ನೋಡುವ ಪೋಷಕರು, ಮಗುವಿನ ಡ್ಯಾನ್ಸ್‌ನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು, ತಮ್ಮ ಸಂಬಂಧಿಗಳಿಗೆ ಹಂಚಿದರು.
ಇಂತಹದೊಂದು ಮಧುರ ಕ್ಷಣ ನಗರದ ಸೆಂಟ್ ಜಾನ್ಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಳೆಗಾಲವಾದ ಕಾರಣ ರೈನ್ ಡೇಯನ್ನು  ಶಾಲೆಯ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು. ಛತ್ರಿ, ರೈನ್ ಕೋಟ್ ಹಾಕಿದ ಮಕ್ಕಳು ಮಳೆಯ ಸ್ವಾದವನ್ನು ಅನುಭವಿಸಿದರು. ತರಗತಿಯಲ್ಲಿಯೂ ಕೂಡ ಕೃತಕ ಮಳೆಯ ಅನುಭವವನ್ನು ಸೃಷ್ಟಿ ಮಾಡಲಾಗಿತ್ತು. ರೈನ್ ಡೇ ನಿಮಿತ್ತ ಪೋಷಕರಿಗೆ ಮೊದಲೇ ರೈನ್ ಕೋಟ್, ಛತ್ರಿಯನ್ನು ತರಲು ಹೇಳಲಾಗಿತ್ತು. ಅದರಂತೆ ಶನಿವಾರ ಮಕ್ಕಳು ರೈನ್ ಡೇಯಲ್ಲಿ ಭಾಗವಹಿಸಿದ್ದರು. ಮಕ್ಕಳ ನೃತ್ಯಕ್ಕೆ ಶಿಕ್ಷಕಿಯರು ಸಾಥ್ ನೀಡಿದ್ದರು. ಇನ್ನು ತೊದಲ ನುಡಿಯಲ್ಲಿ ಹಾಡುತ್ತಿದ್ದ ಮಕ್ಕಳು, ಹೆಜ್ಜೆಯನ್ನು ಅತ್ತಿಂದಿತ್ತ ಹಾಕುತ್ತಿದ್ದರೇ, ಶಿಕ್ಷಕಿಯರು ಅವರನ್ನು ಸರಿ ಮಾಡುವುದು ಸಾಹಸವೇ ಆಗಿತ್ತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ, ಕವಿತಾ, ಪ್ರೀತಾ ರೈ, ಭಾರತಿ ಸೇರಿದಂತೆ ಇತರರು ಇದ್ದರು.