ಸೆ. 9 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ ಲಾಭ ಪಡೆಯಿರಿ

ಬೀದರ್: ಆ.18:ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆಪ್ಟೆಂಬರ 9 ರಂದು ಬೀದರ್ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಹೆಚ್ಚಿನ ಲಾಭ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮಪ್ಪ ಕಲ್ಯಾಣರಾವ ಕನಕಟ್ಟೆ ಹೇಳಿದರು.

ಬುಧವಾರ ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಲೋಕ ಅದಾಲತನಲ್ಲಿ ನ್ಯಾಯಾಲಯದಲ್ಲಿ ಪ್ರಸುತ್ತ ಚಾಲ್ತಿಯಲ್ಲಿರುವ ಆಸ್ತಿಪಾಲು, ಜೀವನಾಂಶ, ಚೆಕ್ ಬೌನ್ಸ್, ವಿದ್ಯುತ್, ಕಂದಾಯ, ಬ್ಯಾಂಕ್, ವಿವಾಹ ವಿಚ್ಛೇದನ ಸಂಬಂದಿಸಿದ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಇರುತ್ತದೆ ಎಂದು ಹೇಳಿದರು.

ಈ ಹಿಂದೆ ಜುಲೈ 08 ರಂದು ನಡೆದ ಲೋಕ ಅದಾಲತನಲ್ಲಿ ಜಿಲ್ಲೆಯಲ್ಲಿ 23,340 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರೆಸಿದ್ದು, ಒಟ್ಟು 10,36,52,476 ರೂ.ಗಳನ್ನು ಪರಿಹಾರ ಮತ್ತು ವಸೂಲಾತಿ ಮೂಲಕ ಕಕ್ಷಿದಾರರಿಗೆ ಹಣ ಕೊಡಿಸಲಾಗಿದೆ. 23,340 ಪ್ರಕರಣಗಳಲ್ಲಿ 17521 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಾಗಿದ್ದವು ಇವುಗಳನ್ನು ಇತ್ಯರ್ಥಪಡಿಸಿ ಒಟ್ಟು 8,77,99,058 ರೂ. ಪರಿಹಾರ ಒದಗಿಸಲಾಗಿದೆ. ಅದೇ ರೀತಿ ಒಟ್ಟು 12963 ವ್ಯಾಜಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿ 1,58,53,418 ಪರಿಹಾರಿ ನೀಡಲಾಗಿದೆ. 111 ಬ್ಯಾಂಕ್ ವಸೂಲಾತಿ ಪ್ರಕರಣಗಳ ಇತ್ಯರ್ಥಗೊಳಿಸಿ 1,05,13,471 ರೂ ವಸೂಲಾತಿ ಮಾಡಲಾಗಿದೆ. ನಗರಸಭೆ ಪುರಸಭೆ, ಗ್ರಾಮ ಪಂಚಾಯತಿಗಳ ನೀರಿನ ತೆರಿಗೆ, ಬಿ.ಎಸ್.ಎನ್.ಎಲ್, ಜೆಸ್ಕಾಂ ಬಾಕಿ ಬಿಲ್ಲು, ಟ್ರಾಫಿಕ್ ಚಾಲನ್ ವಸೂಲಾತಿಯ 5708 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 53,39,947 ರೂ. ವಸೂಲಾತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸೆಪ್ಟೆಂಬರ್ 9 ರಂದು ನಡೆಯುವ ಲೋಕ ಅದಾಲತನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸಲು ಯೋಜನೆ ರೂಪಿಸಲಾಗಿದೆ. 2023ರ ಅಗಸ್ಟ್ 01ರವರೆಗೆ ಜಿಲ್ಲೆಯಲ್ಲಿ ಒಟ್ಟು 26322 ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಬಾಕಿ ಇವೆ ಎಂಬ ಮಾಹಿತಿ ಇದೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ಈ ಬಾರಿಯ ಲೋಕ ಅದಾಲತನಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದು ಹೇಳಿದರು.

ಲೋಕ ಅದಾಲತನಲ್ಲಿ ರಾಜಿ ಸಂಧಾನ ಮಾಡಿಕೊಳ್ಳುವ ಕಕ್ಷಿದಾರರಿಗೆ ನ್ಯಾಯಾಲಯದ ಶುಲ್ಕ ವಾಪಸ್ ಸಿಗಲಿದೆ ಹಾಗೂ ಲೋಕ ಅದಾಲತನಲ್ಲಿ ನಿರ್ಣಯವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇಲ್ಲಿ ತಮ್ಮ ದ್ವೇಷ ಮರೆತು ಪ್ರಕರಣಗಳನ್ನು ಒಳ್ಳೆಯ ಬಾಂಧವ್ಯದೊಂದಿಗೆ ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು. ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಛೇರಿ ಸಿಬ್ಬಂದಿಗಳು, ಜಿಲ್ಲಾ ವಾರ್ತಾ ಅಧಿಕಾರಿ ಜಿ ಸುರೇಶ, ಹಾಗೂ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.