
ಕಲಬುರಗಿ,ಆ.16: ಅತಿ ಹಿಂದುಳಿದವರ ವಿರಾಟ್ ಪ್ರದರ್ಶನವು ಬೆಂಗಳೂರು ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 9 ರಂದು ನಡೆಯಲಿದ್ದು ಈಡಿಗ – ಬಿಲ್ಲವ ಸೇರಿದಂತೆ 26 ಪಂಗಡಗಳು ಇದರ ನೇತೃತ್ವ ವಹಿಸಲಿದ್ದು ಎಲ್ಲ ಅತಿ ಹಿಂದುಳಿದ ಕಾಯಕ ಸಮಾಜದ ಸ್ವಾಮೀಜಿಗಳು ಒಗ್ಗಟ್ಟಿನಿಂದ ಪಾಲ್ಗೊಳ್ಳಲಿದ್ದಾರೆ ಎಂದು ಕಲಬುರ್ಗಿ ಜಿಲ್ಲೆಯ ಚಿತಾಪುರ ತಾಲೂಕಿನ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದರು
ಕಲ್ಬುರ್ಗಿಯ ಜಗತ್ ವೃತ್ತದ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಲ ಮತ್ತು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ನೇತೃತ್ವದಲ್ಲಿ ನಡೆದ ಕಲ್ಬುರ್ಗಿ ಜಿಲ್ಲಾ ಮಟ್ಟದ ವಿಶೇಷ ಚಿಂತನ ಶಿಬಿರ ವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬೆಂಗಳೂರು ಸಮಾವೇಶದ ಮನವಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ನಿಗಮ ಘೋಷಣೆಯಾದರೂ ಹಣ ಬಿಡುಗಡೆ ಮಾಡಲಿಲ್ಲ. ಸಮುದಾಯದ ಎರಡು ಸಚಿವ ಸ್ಥಾನಗಳನ್ನು ನೀಡದೆ ಕೇವಲ ಒಂದನ್ನು ಮಾತ್ರ ಕೊಡಲಾಗಿದ್ದು ಸಮುದಾಯದ ಹಿರಿಯ ನಾಯಕರನ್ನು ಕಡೆಗಣಿಸುವ ಕುತಂತ್ರ ನಡೆಯುತ್ತಿದೆ. ಇದಕ್ಕಾಗಿ ಅತಿ ಹಿಂದುಳಿದ(ಎಂ ಸಿ ಬಿ- ,ಮೋಸ್ಟ್ ಬ್ಯಾಕ್ವರ್ಡ್ ಕಮ್ಯುನಿಟಿ) ಒಕ್ಕೂಟ ರಚನೆ ಮಾಡಿ ರಾಜಕೀಯ ಶಕ್ತಿ ಪಡೆದು ಅತಿ ಹಿಂದುಳಿದವರ ಅಭಿವೃದ್ಧಿಗಾಗಿ ಕಂಕಣಬದ್ಧವಾಗಲು ಸೆ . 9 ರಂದು ಬೆಂಗಳೂರಿನ ಅರಮನೆ ಮೈದಾನದ ಪೆಟಲ್ ಗೇಟ್ ನಲ್ಲಿ ವಿಶೇಷ ಚಿಂತನ ಸಭೆ ನಡೆಯಲಿದೆ. ಇದರಲ್ಲಿ ಅತಿ ಹಿಂದುಳಿದ ಎಲ್ಲ ಕಾಯಕ ಸಮುದಾಯದ ಸ್ವಾಮೀಜಿಗಳು ಕೂಡಾ ಪಾಲ್ಗೊಳ್ಳುತ್ತಿದ್ದು ಕೇಂದ್ರದ ಸಚಿವರಾದ ಶ್ರೀಪಾದ ಯಸ್ಸೋ ನಾಯಕ್, ತೆಲಂಗಾಣದ ಶ್ರೀನಿವಾಸ ಗೌಡ, ಕೇರಳದ ಶಶಿಂದ್ರನ್ ಹಾಗೂ ಚೆನ್ನೈ, ಗೋವಾ ಮುಂತಾದೆಡೆಗಳ ನಾಯಕರು ಪಾಲ್ಗೊಳ್ಳಲಿರುವರು. ಈ ಸಮಾವೇಶವನ್ನು ಆಂಧ್ರಪ್ರದೇಶದ ವಸತಿ ಖಾತೆಯ ಸಚಿವರಾದ ಈಡಿಗ ಸಮುದಾಯದ ಜೋಗಿ ರಮೇಶ್ ಉದ್ಘಾಟಿಸಲಿದ್ದಾರೆ. ಗುಜರಾತ್, ರಾಜಸ್ಥಾನ್ ಮುಂತಾದಡಗಳಿಂದ ಸಮುದಾಯದ ನಾಯಕರು, ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕಲ್ಬುರ್ಗಿ ಜಿಲ್ಲೆಯಿಂದ ಈ ಸಮಾವೇಶಕ್ಕೆ 20 ಬಸ್ಸುಗಳನ್ನು ನಿಯೋಜಿಸಲಾಗಿದ್ದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅತಿ ಹಿಂದುಳಿದ ಸಮುದಾಯದ ಜನರು ಭಾಗವಹಿಸಲಿದ್ದಾರೆ. ಈ ಸಭೆಯ ಯಶಸ್ಸಿನ ನಂತರ ಉಡುಪಿಯಲ್ಲಿ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಸುಮಾರು 15 ಲಕ್ಷ ಜನ ಸೇರುವ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಈಡಿಗ ಸಮುದಾಯದ ಹಿರಿಯ ನಾಯಕರಾದ ಸುಮಾರು 49 ವರ್ಷಗಳಷ್ಟು ಕಾಲ ನಿಷ್ಠಾವಂತ ಕಾಂಗ್ರೆಸ್ ನಾಯಕರಾಗಿ ಹಾಗೂ 19 ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಕೆಲಸ ನಿರ್ವಹಿಸಿ ಪಕ್ಷವನ್ನು ಮುನ್ನಡೆಸಿದ ಕೇಂದ್ರ ನಾಯಕರಾದ ಬಿ.ಕೆ ಹರಿಪ್ರಸಾದ್ ಅವರನ್ನು ಮೂಲೆಗುಂಪು ಮಾಡಲು ನಡೆಯುತ್ತಿರುವ ಹುನ್ನಾರದ ವಿರುದ್ಧ ಸಮಾಜವು ಈಗ ಧ್ವನಿ ಎತ್ತಿ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿದೆ. ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿ ಎಸ್.ಆರ್ ಜಾಲಪ್ಪ, ಜನಾರ್ಧನ ಪೂಜಾರಿ ಮುಂತಾದ ನಾಯಕರನ್ನು ಮೂಲೆಗುಂಪು ಮಾಡಲಾಗಿದ್ದು ಯಾವುದೇ ಪಕ್ಷದ ನಮ್ಮ ಸಮುದಾಯದ ನಾಯಕರಿಗೆ ಇನ್ನು ಮುಂದೆ ಅನ್ಯಾಯವಾದರೆ ರಾಜ್ಯಾದ್ಯಂತ ಒಕ್ಕೊರಲಿನಿಂದ ಧ್ವನಿ ಎತ್ತಿ ಪ್ರತಿಭಟಿಸಲಾಗುವುದು. ರಾಜ್ಯದಲ್ಲಿ ಸುಮಾರು 70 ಲಕ್ಷದಷ್ಟು ಇರುವ ಈ ಸಮುದಾಯವನ್ನು ಕಡೆಗಣಿಸಿದರೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಹಿಂದುಳಿದ ನಾಯಕನಾಗಿ ರಾಜಕೀಯದಲ್ಲಿ ಬೆಳೆದ ಬಂಗಾರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾದ ಹಾಗೆ ಮುಂದಿನ ದಿನಗಳಲ್ಲಿ ಅತಿ ಹಿಂದುಳಿದ ಸಮುದಾಯದವರು ರಾಜ್ಯದ ಚುಕ್ಕಾಣಿಯನ್ನು ಹಿಡಿಯಲು ಸಂಘಟಿತ ಶಕ್ತಿಯನ್ನು ಹೊಂದಲು ಮತ್ತು ರಾಜಕೀಯ ಶಕ್ತಿಯನ್ನು ಪಡೆಯಲು ಈ ಸಮಾವೇಶ ಏರ್ಪಡಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು. ಈಡಿಗ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಈಗ ಸಮುದಾಯ ಎಚ್ಚೆತ್ತುಕೊಂಡಿದೆ.
ಬೆಂಗಳೂರಿನ ಸಮಾವೇಶಕ್ಕೆ ಕಲ್ಬುರ್ಗಿ ಜಿಲ್ಲೆಯಿಂದ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಮಾಡಲು ಪೂರ್ಣ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಹರ್ಷಾನಂದ ಗುತ್ತೇದಾರ್ ಹೇಳಿದರು. ಪೂಜ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಹೋರಾಟ ಮತ್ತು ಜಾಗೃತಿ ಸಮಾವೇಶಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನಬೆಂಬಲ ವ್ಯಕ್ತ ವಾಗುತ್ತಿದ್ದು ಅತಿ ಹಿಂದುಳಿದ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋರಾಟಕ್ಕೆ ರೂಪು ನೀಡಿರೋದು ರಾಜಕೀಯದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ ಮತ್ತು ಇದಕ್ಕೆ ಸರ್ವ ರೀತಿಯ ಬೆಂಬಲ ನೀಡುತ್ತೇವೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಹೇಳಿದರು ಸಭೆಯಲ್ಲಿ ಸಮಿತಿ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್ ರಾಷ್ಟ್ರೀಯ ಈಡಿಗ ಮಹಾಮಂಡಲದ ಕಲಬುರ್ಗಿ ಜಿಲ್ಲಾಧ್ಯಕ್ಷರಾದ ಸುರೇಶ್ ಗುತ್ತೇದಾರ್, ಮಹಿಳಾ ಯುವ ಘಟಕದ ರಾಜ್ಯಾಧ್ಯಕ್ಷರಾದ ಕು.ಅಂಬಿಕಾ ಮಾಧವಾರ್, ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಮತ್ತಿತರರು ಇದ್ದರು. ಚಿಂಚೋಳಿ ಸೇಡಂ ಚಿತ್ತಾಪುರ ಅಳಂದ ಜೇವರ್ಗಿ ಕಲಬುರ್ಗಿ ಅಫ್ಜಲ್ಪುರ ತಾಲೂಕುಗಳ ಅಧ್ಯಕ್ಷರುಗಳು ಚಿಂತನ ಸಭೆಯಲ್ಲಿ ಸಲಹೆ ಸೂಚನೆ ನೀಡಿದರು. ಸಮುದಾಯದ ಚಿಂತಕರಾದ ಡಾ. ಸದಾನಂದ ಪೆರ್ಲ ಮತ್ತು ಪತ್ರಕರ್ತ ಕಾಶಿನಾಥ್ ಗುತ್ತೇದಾರ್ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಕಲಾವಿದರಾದ ಬಸಯ್ಯ ಗುತ್ತೇದಾರ್ ಪ್ರಾರ್ಥನಾ ಗೀತೆ ಹಾಡಿದರು. ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯತಿಗೆ ಅಧ್ಯಕ್ಷರು ಮತ್ತು ಸದಸ್ಯರಾಗಿ ನೇಮಕ ಹೊಂದಿದವರಿಗೆ ಗೌರವಹಿಸಲಾಯಿತು. ಇತ್ತೀಚೆಗೆ ಅಗಲಿದ ಶ್ರೀಮತಿ ಸ್ಪಂದನಾ ವಿಜಯ ರಾಘವೇಂದ್ರ ಅವರ ಗೌರವಾರ್ಥ ಶೋಕಾಚರಣೆ ಮಾಡಲಾಯಿತು.