ಸೆ.27, 29 ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

ಕೋಲಾರ,ಸೆ.೨೫- ಜಿಲ್ಲೆಯ ೩ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಕಲ ಸಿದ್ದತೆ ನಡೆಸಿದ್ದು, ಕೋಲಾರದ ೨ ಹಾಗೂ ಬಂಗಾರಪೇಟೆಯ ೧ ಕೇಂದ್ರ ಸೇರಿದಂತೆ ಜಿಲ್ಲೆಯ ಒಟ್ಟು ೩ ಕೇಂದ್ರಗಳಲ್ಲಿ ಕೇವಲ ೩೪೪ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೋಲಾರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ೧೨೩ ವಿದ್ಯಾರ್ಥಿಗಳು, ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ೧೨೭ ಹಾಗೂ ಬಂಗಾರಪೇಟೆ ಸಂತೋಷ್ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ೯೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗೈರಾದವರು, ಹಿಂದಿನ ವರ್ಷಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಪರೀಕ್ಷೆ ತೆಗೆದುಕೊಳ್ಳದ ಅಭ್ಯರ್ಥಿಗಳು ಈ ಪೂರಕ ಪರೀಕ್ಷೆಯಲ್ಲಿ ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷಾ ಕಾರ್ಯಕ್ಕೆ ಈಗಾಗಲೇ ಅಧೀಕ್ಷಕರು,ಕಸ್ಟೋಡಿಯನ್, ಜಾಗೃತ ದಳದ ಸಿಬ್ಬಂದಿ,ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದ ಅವರು, ಶಾಲೆಗಳಲ್ಲಿ ತರಗತಿಗಳಿಗೆ ತೊಂದರೆಯಾಗದಂತೆ ಹೆಚ್ಚಿನ ಪ್ರಮಾಣದಲ್ಲಿ ದೈಹಿಕ ಹಾಗೂ ವೃತ್ತಿಶಿಕ್ಷಕರನ್ನೇ ಕೊಠಡಿ ಮೇಲ್ವಿಚಾರಕರಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಡಿಸಿ ಆದೇಶ ನಿಷೇಧಾಜ್ಞೆ ಜಾರಿ
ಪರೀಕ್ಷಾ ಕೇಂದ್ರಗಳ ಸುತ್ತ ಪರೀಕ್ಷಾ ದಿನದಂದು ೨೦೦ ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯುವ ಎರಡೂ ದಿನ ೧೪೪ ನೇ ಸೆಕ್ಷನ್ ಅನ್ವಯ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಹೊರಡಿಸಿದ್ದು, ಈ ಅವಧಿಯಲ್ಲಿ ಈ ವ್ಯಾಪ್ತಿಯ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.
ಪ್ರತಿ ಕೇಂದ್ರದಲ್ಲೂ ವಿಶೇಷ ಕೊಠಡಿ
ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿದ್ಯಾರ್ಥಿಗಳಿಗೆ ಶುಭಕೋರಿ ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷೆಗೆ ಬರುವ ಸಿಬ್ಬಂದಿ,ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ, ಸ್ಯಾನಿಟೈಸರ್ ವ್ಯವಸ್ಥೆ ಇದ್ದು, ಮಾಸ್ಕ್ ಕಡ್ಡಾಯವಾಗಿದೆ. ಅನಾರೋಗ್ಯಪೀಡಿತ, ಕೋವಿಡ್ ಲಕ್ಷಣಗಳುಳ್ಳ ಮಕ್ಕಳು ಪರೀಕ್ಷೆಗೆ ಬಂದಲ್ಲಿ ಅವರಿಗೆ ಪ್ರತ್ಯೇಕ ವಿಶೇಷ ಕೊಠಡಿ ಪ್ರತಿ ಕೇಂದ್ರದಲ್ಲೂ ಸಿದ್ದವಿರಲಿದೆ ಎಂದು ತಿಳಿಸಿದ್ದಾರೆ.
ಪ್ರತಿ ವಿದ್ಯಾರ್ಥಿಗೂ ಒಂದೊಂದು ಡೆಸ್ಕ್ ಒದಗಿಸಬೇಕಾದ ಕಾರಣ, ಆಸನ ವ್ಯವಸ್ಥೆಗೆ ಒತ್ತು ನೀಡಲಾಗಿದೆ, ಯಾವುದೇ ವಿದ್ಯಾರ್ಥಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತಿಲ್ಲ ಎಂದು ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ಕೇಂದ್ರಗಳಲ್ಲೂ ಸೆ.೨೫ರ ಶನಿವಾರ ಪರೀಕ್ಷಾ ಸಿಬ್ಬಂದಿಯ ಸಭೆ ನಡೆಸಿದ್ದು, ಅಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಯಾವುದೇ ಗೊಂದಲಗಳಿಲ್ಲದೇ ಪರೀಕ್ಷೆ ಸುಗಮವಾಗಿ ನಡೆಸಲು ಇಲಾಖೆ ಸನ್ನದ್ದವಾಗಿದೆ ಎಂದು ತಿಳಿಸಿದರು.