ಸೆ.26 ಕ್ಕೆ ದ್ರೌಪದಿ ಮುರ್ಮು ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ

ಧಾರವಾಡ, ಸೆ.18- ಈ ತಿಂಗಳ 26 ರಂದು ರಾಷ್ಟ್ರಪತಿ ದ್ರೌಪದಿ‌ ಮುರ್ಮು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಹುಬ್ಬಳ್ಳಿ ಧಾರವಾಡ ನಗರಕ್ಕೆ ಭೇಟಿ ನೀಡುತ್ತಿರುವ ಮೂರನೇ ರಾಷ್ಟ್ರಪತಿಗಳಾಗಿದ್ದಾರೆ. ಈ ಹಿಂದೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಡಾ. ಎ. ಪಿಜೆ ಅಬ್ದುಲ್‌ ಕಲಾಂ ಭೇಟಿ ನೀಡಿದ್ದರು ಎಂದು ತಿಳಿಸಿದರು.
ರಾಷ್ಟ್ರಪತಿಯವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ‌ಪಾಲಿಕೆಯಿಂದ ಪೌರಸನ್ಮಾನ ಏರ್ಪಡಿಸಲಾಗಿದೆ. ರಾಷ್ಟ್ರಪತಿಗಳಿಗೆ ನೆನಪಿನ ಕಾಣಿಕೆಯಾಗಿ ಸಿದ್ಧಾರೂಢರ 1.5ಕೆಜಿ ಬೆಳ್ಳಿಯ ಮೂರ್ತಿಯನ್ನು ನೀಡಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಜಿಮ್‌ಖಾನಾ ಮೈದಾನದಲ್ಲಿ‌ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಪೌರಸನ್ಮಾನ ಕಾರ್ಯಕ್ರಮದಲ್ಲಿ 5 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ದ್ರೌಪದಿ ಮುರ್ಮು ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ.