ಸೆ. 23ಕ್ಕೆ ಮಂಗಳಮುಖಿಯರಿಂದ ನಾಟಕೋತ್ಸವ

ಕಲಬುರಗಿ:ಸೆ.20: ನಗರ ಹಾಗೂ ಜಿಲ್ಲೆಯ ಸೇಡಂ ತಾಲ್ಲೂಕಿನ ನೀಲಹಳ್ಳಿ ಗ್ರಾಮದಲ್ಲಿಸೆಪ್ಟೆಂಬರ್ 23ರಂದು ಎರಡು ಸ್ಥಳಗಳಲ್ಲಿ ಮಂಗಳಮುಖಿಯರಿಂದ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಬೆಂಗಳೂರಿನ ಅರ್ಧನಾರೀಶ್ವರ್ ಕಲಾ ಅಭಿವೃದ್ಧಿ ಟ್ರಸ್ಟ್‍ನ ಸ್ವಪ್ನಾ ನಾಗರಾಜ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಂಬಾ ಕಲಾ ಸಂಘ, ಕನ್ನಡ ಮತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಬೆಳಿಗ್ಗೆ ಹಾಗೂ ನೀಲಹಳ್ಳಿಯಲ್ಲಿ ಸಂಜೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸೆಪ್ಟೆಂಬರ್ 23ರಂದು ಮಧ್ಯಾಹ್ನ 3 ಗಂಟೆಗೆ ಸುಮಾರು 20 ಜನರ ಮಂಗಳಮುಖಿಯರು ಸೇರಿ ಹಳ್ಳಿ ಹೆಂಡ್ತಿ ಮಿಲ್ಟ್ರಿ ಗಂಡ ಎಂಬ ನಾಟಕವನ್ನು ಪ್ರಸ್ತುತಪಡಿಸುವರು. ನಮ್ಮೊಂದಿಗೆ ನಗರದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳೂ ಸಹ ನೀವು ಎಲ್ಲಿದ್ದೀರಾ? ಎಂಬ ನಾಟಕವನ್ನು ಪ್ರದರ್ಶಿಸುವರು. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ನಾಟಕೋತ್ಸವ ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ಮಳೇಂದರ ಶಿವಾಚಾರ್ಯರು ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ದಕ್ಷಿಣ ಕ್ಷೇತ್ರದ ಅಲ್ಲಮಪ್ರಭು ಪಾಟೀಲ್, ಅಫಜಲಪುರದ ಎಂ.ವೈ. ಪಾಟೀಲ್, ದಕ್ಷಿಣ ಕ್ಷೇತ್ರದ ಶ್ರೀಮತಿ ಕನೀಜಾ ಫಾತಿಮಾ, ಗ್ರಾಮೀಣ ಕ್ಷೇತ್ರದ ಬಸವರಾಜ್ ಮತ್ತಿಮೂಡ್, ಆಳಂದ್ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮುಂತಾದವರು ಆಗಮಿಸುವರು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅರೆ ಸರ್ಕಾರಿ ನೌಕರರ ಬಂಜಾರಾ ಸಂಘದ ಗೌರವ ಅಧ್ಯಕ್ಷ ಪ್ರೇಮಸಿಂಗ್ ಚವ್ಹಾಣ್, ಜಿಲ್ಲಾ ಸ್ವ ಸಹಾಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಲ್ಲಮ್ಮ ಕಡ್ಲಾ, ಶ್ರೀಮತಿ ಅರುಣಾ ಗೋಟೂರ್ ಹಾಗೂ ಗಣ್ಯರಿಗೆ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಸಂಜೆ 6 ಗಂಟೆಗೆ ಜಿಲ್ಲೆಯ ಸೇಡಂ ತಾಲ್ಲೂಕಿನ ನೀಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಮಂಗಳಮುಖಿಯರಿಂದ ನಾಟಕ ಪ್ರದರ್ಶನ ಜರುಗಲಿದೆ. ಉದ್ಘಾಟನೆಯನ್ನು ರಾಜ್ಯಸಭೆಯ ಮಾಜಿ ಸದಸ್ಯ ಡಾ. ಬಸವರಾಜ್ ಪಾಟೀಲ್ ಸೇಡಂ ಅವರು ನೆರವೇರಿಸುವರು. ಅಧ್ಯಕ್ಷೆಯನ್ನು ಸಂತೋಷಿ ಪವಾರ್ ಅವರು ವಹಿಸುವರು. ಸಮಾರಂಭದಲ್ಲಿ ಶಿವಲೀಲಾ ಡೆಂಗಿ, ಡಾ. ಫಾರೂಖ್ ಮಣ್ಣೂರ್, ಭೀಮರಾಯ್ ಶಾಂತಲಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಹೇಳಿದ ಅವರು, ಮಂಗಳಮುಖಿಯರೂ ಸಹ ಕಲಾವಿದರು ಎಂಬುದನ್ನು ಅಭಿವ್ಯಕ್ತಿಪಡಿಸಲು ರಂಗಭೂಮಿಯನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಮಂಗಳಮುಖಿಯರು ಕೇವಲ ಭಿಕ್ಷೆಯನ್ನು ಬೇಡುತ್ತಾರೆ ಎಂಬ ದೃಷ್ಟಿಕೋನವನ್ನು ಬದಲಾಯಿಸಲು ಇಂತಹ ನಾಟಕ ಪ್ರದರ್ಶನ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮನ್ನು ಜನರು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ತಿಳಿಸಿದರು.
ಈಗಾಗಲೇ ನಾವು ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದೆವು. ಕೋವಿಡ್ ಕಾರಣದಿಂದಾಗಿ ಪ್ರಯೋಗಗಳು ಆಗಲಿಲ್ಲ. ಈಗ ಜಿಲ್ಲೆಯಿಂದಲೇ ನಾಟಕೋತ್ಸವ ಆರಂಭಿಸುತ್ತಿದ್ದೇವೆ. ಜಿಲ್ಲೆಯ ಜನತೆ ನಾಟಕೋತ್ಸವದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಮಂಗಳಮುಖಯಿಯರಾದ ಪೂಜಾ, ವಿಶಾಲಾಕ್ಷಿ ಮುಂತಾದವರು ಉಪಸ್ಥಿತರಿದ್ದರು.